ಬೆಂಗಳೂರು, ಸೆ. 06 (DaijiworldNews/PY): "ಬೆಳಗಾವಿಯಲ್ಲಿ ಮೊದಲ ಬಾರಿಗೆ ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದಿದ್ದು, ಇದು ಐತಿಹಾಸಿಕ ಗೆಲುವಾಗಿದೆ" ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
"ಸಂಸದರು ಸೇರಿದಂತೆ ಶಾಸಕರ ಹಾಗೂ ವಿಧಾನಪರಿಷತ್ ಸದಸ್ಯರ ಬೆಂಬಲದೊಂದಿಗೆ ಹುಬ್ಬಳ್ಳಿ-ಧಾರವಾಡ ಹಾಗೂ ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮತ್ತೆ ಸ್ಪಷ್ಟ ಬಹುಮತದಿಂದ ಆಧಿಕಾರಕ್ಕೆ ಬರಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆಗಳಲ್ಲಿ ಬಿಜೆಪಿ ಮತದಾರರ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗಿದೆ. ಪಕ್ಷದ ಚಿಹ್ನೆಯ ಮೇಲೆ ನಡೆದ ಚುನಾವಣೆಯಲ್ಲಿ ಮತದಾರರು, ಬಿಜೆಪಿಯ ಅಭಿವೃದ್ಧಿ ಮಂತ್ರಕ್ಕೆ ಜನಾದೇಶ ನೀಡಿದ್ದಾರೆ. ನಮ್ಮ ರಾಜ್ಯಾಧ್ಯಕ್ಷರಿಗೆ, ಪಕ್ಷದ ಎಲ್ಲ ಮುಖಂಡರಿಗೆ, ಗೆದ್ದ ಅಭ್ಯರ್ಥಿಗಳಿಗೆ, ಕಾರ್ಯಕರ್ತರಿಗೆ ಅಭಿನಂದನೆಗಳು" ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
"ಬಸವರಾಜ ಬೊಮ್ಮಾಯಿ ಅವರು ಸಿಎಂ ಆದ ಬಳಿಕ ರಾಜ್ಯದಲ್ಲಿ ಉತ್ತಮ ಫಲಿತಾಂಶ ಬಂದಿದೆ. ಮೂರು ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಅಭಿವೃದ್ಧಿಪರ ಆಡಳಿತ ನೀಡಲಿದೆ" ಎಂದು ಹೇಳಿದ್ದಾರೆ.
"ಈ ಐತಿಹಾಸಿಕ ಗೆಲುವಿಗೆ ಶ್ರಮಿಸಿದ ಪಕ್ಷದ ಎಲ್ಲಾ ಕಾರ್ಯಕರ್ತರು ಸೇರಿದಂತೆ ಮತದಾರರಿಗೆ ಹಾಗೂ ಮುಖಂಡರಿಗೆ ಅಭಿನಂದನೆಗಳು" ಎಂದು ತಿಳಿಸಿದ್ದಾರೆ.