ಬೆಂಗಳೂರು, ಸೆ. 06 (DaijiworldNews/PY): "ಜನಸೇವೆ ಮಾಡುವುದರ ಬದಲಾಗಿ ಹಲವು ದಶಕಗಳಿಂದ ಒಂದು ಕುಟುಂಬದ ಸೇವೆ ಮಾಡುತ್ತಿದ್ದ ಕಾಂಗ್ರೆಸ್ ಪಕ್ಷವನ್ನು ಸ್ಥಳೀಯ ಹಂತದಲ್ಲೂ ಜನರು ತಿರಸ್ಕರಿಸಿದ್ದಾರೆ" ಎಂದು ರಾಜ್ಯ ಬಿಜೆಪಿ ಟೀಕಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, "ಕಾಂಗ್ರೆಸ್ ಪಕ್ಷ ಪ್ರತಿಹಂತದಲ್ಲೂ ಜನತೆಯ ವಿಶ್ವಾಸ ಕಳೆದುಕೊಳ್ಳುತ್ತಿದೆ. ಜನಸೇವೆ ಮಾಡುವುದರ ಬದಲಾಗಿ ಹಲವು ದಶಕಗಳಿಂದ ಒಂದು ಕುಟುಂಬದ ಸೇವೆ ಮಾಡುತ್ತಿದ್ದ ಕಾಂಗ್ರೆಸ್ ಪಕ್ಷವನ್ನು ಸ್ಥಳೀಯ ಹಂತದಲ್ಲೂ ಜನರು ತಿರಸ್ಕರಿಸಿದ್ದಾರೆ" ಎಂದಿದೆ.
"ಉತ್ತರ ಕರ್ನಾಟಕದಲ್ಲಿ ಜನತೆಗೆ ಬಿಜೆಪಿ ಪಕ್ಷ ಇನ್ನಷ್ಟು ಹತ್ತಿರವಾಗಿದೆ. ಮಹಾನಗರ ಪಾಲಿಕೆ ಚುನಾವಣೆಗಳ ಫಲಿತಾಂಶವೇ ಇದಕ್ಕೆ ಸಾಕ್ಷಿಯಾಗಿದೆ. ಕಾಂಗ್ರೆಸ್ ಪಕ್ಷದ ಜನವಿರೋಧಿ ನಿಲುವುಗಳನ್ನು ಜನತೆ ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಬಿಜೆಪಿ ಪಕ್ಷಕ್ಕೆ ಜನಾಶೀರ್ವಾದ ಲಭಿಸಿದೆ. ಬಿಜೆಪಿ ಪಕ್ಷ ದೊಡ್ಡಬಳ್ಳಾಪುರ ನಗರಸಭೆಯಲ್ಲಿಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ದಕ್ಷಿಣ ಕರ್ನಾಟಕದಲ್ಲೂ ಬಿಜೆಪಿ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ" ಎಂದು ತಿಳಿಸಿದೆ.
"ಮಾನ್ಯ ಸಿದ್ದರಾಮಯ್ಯ ಅವರೇ, ನೀವು ಎಷ್ಟೇ ಹೂಂಕರಿಸಿದರೂ ಅದು ಕನಕಪುರ ವಿಧಾನಸಭಾ ಕ್ಷೇತ್ರದ ಗಡಿ ದಾಟುವುದಿಲ್ಲ ಎಂಬುದಕ್ಕೆ ಸ್ಥಳೀಯ ಸಂಸ್ಥೆಗಳ ಫಲಿತಾಂಶವೇ ಸಾಕ್ಷಿ. ಧನಮದದಿಂದ ಜನಮನ ಗೆಲ್ಲುವುದು ಅಸಾಧ್ಯ ಎಂಬುದನ್ನು ಅರ್ಥಮಾಡಿಕೊಳ್ಳಿ" ಎಂದು ಹೇಳಿದೆ.
"ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಸ್ವತಂತ್ರವಾಗಿ ಅಧಿಕಾರ ಹಿಡಿಯುತ್ತಿದೆ. ಕೇಂದ್ರ, ರಾಜ್ಯ ಸರ್ಕಾರಗಳ ಹಾಗೂ ಬೆಳಗಾವಿಯ ಸ್ಥಳೀಯ ನಾಯಕತ್ವದ ಪರವಾಗಿ ಜನತೆ ಮತ ಚಲಾಯಿಸಿ ಬಿಜೆಪಿ ಪಕ್ಷವನ್ನು ಗೆಲ್ಲಿಸಿದ್ದಾರೆ" ಎಂದಿದೆ.
"ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಪಕ್ಷದ ಮೇಲೆ ಜನತೆ ಇಟ್ಟಿರುವ ವಿಶ್ವಾಸಕ್ಕೆ ಧಕ್ಕೆ ಬಂದಿಲ್ಲ ಎಂಬುದಕ್ಕೆ ನಗರ ಸ್ಥಳೀಯ ಸಂಸ್ಥೆಗಳ ಫಲಿತಾಂಶವೇ ಸಾಕ್ಷಿ. ಕಾಂಗ್ರೆಸ್ ಪಕ್ಷದ ಅಪಪ್ರಚಾರವನ್ನು ಜನರು ತಿರಸ್ಕರಿಸಿದ್ದಾರೆ. ಸುಳ್ಳು, ಅಪಪ್ರಚಾರಗಳಿಗೆ ಜನ ಮನ್ನಣೆ ನೀಡಿಲ್ಲ" ಎಂದು ಟೀಕಿಸಿದೆ.
"ಡಿ.ಕೆ ಶಿವಕುಮಾರ್ ಅವರೇ, ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಅನ್ವಯ ಕ್ರಮಕ್ಕೆ ಶಿಫಾರಸು ಮಾಡುತ್ತೀರಾ? ನಗರ ಸ್ಥಳೀಯ ಸಂಸ್ಥೆಗಳ ಪ್ರಚಾರ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಪ್ರಕೃತಿ ಚಿಕಿತ್ಸೆಗೆ ತೆರಳುವ ಮೂಲಕ ಚುನಾವಣೆ ಪ್ರಕ್ರಿಯೆಯಿಂದ ದೂರ ಉಳಿದಿದ್ದರು. ಇದು ಯಾರ ಸೋಲು, ಡಿಕೆಶಿ?" ಎಂದು ಪ್ರಶ್ನಿಸಿದೆ.
"ಡಿಕೆಶಿ ಜೊತೆ ಹೆಗಲುಕೊಟ್ಟು ಹೆಜ್ಜೆ ಹಾಕುವುದಕ್ಕೆ ಡಿಕೆಶಿ ಬಣ ಸಿದ್ದವಿಲ್ಲ ಎಂಬುದಕ್ಕೆ ಇಂದಿನ ಫಲಿತಾಂಶವೇ ಸಾಕ್ಷಿ. ನಾನಿಲ್ಲದೆ ಹೇಗೆ ಗೆಲ್ಲುತ್ತೀರಿ ಎಂಬ ಸಂದೇಶ ನೀಡಲು ಸಿದ್ದರಾಮಯ್ಯ ಪ್ರಕೃತಿ ಚಿಕಿತ್ಸೆಗೆ ತೆರಳಿದ್ದರು. ಕಾಂಗ್ರೆಸ್ ಸೋತಿದೆ. ಸಿದ್ದರಾಮಯ್ಯ ಎದುರು ಸೋಲೊಪ್ಪಿಕೊಳ್ಳುತ್ತೀರಾ ಡಿಕೆಶಿ?" ಎಂದು ಕೇಳಿದೆ.
"ಸಿದ್ದರಾಮಯ್ಯ ಅವರೇ, ಚುನಾವಣೆಯ ಸಂದರ್ಭದಲ್ಲಿ ಸೋಲಿನ ಮುನ್ಸೂಚನೆ ಪಡೆದು ಡಿಕೆಶಿ ಅವರನ್ನು ಏಕಾಂಗಿಯಾಗಿಸಿ ಪಿಳ್ಳೆ ನೆಪ ಹೇಳಿ ಪ್ರಕೃತಿ ಚಿಕಿತ್ಸೆಗೆ ತೆರಳಿದ್ದೀರಿ. ಸೋಲಿನ ಭಯದಿಂದ ಪಲಾಯನವಾದ ಅನುಸರಿಸಿದ ನೀವು ಇಂದು ಜನರ ತೀರ್ಪನ್ನು ಜನತಾ ನ್ಯಾಯಾಲಯದ ಆದೇಶವನ್ನು ಪ್ರಶ್ನೆ ಮಾಡುತ್ತೀರಾ?" ಎಂದು ಪ್ರಶ್ನಿಸಿದೆ.