ಬೆಂಗಳೂರು, ಸೆ. 06 (DaijiworldNews/PY): "ನಮ್ಮ ಸರ್ಕಾರ ಬಂದ ಒಂದು ತಿಂಗಳಿನಲ್ಲಿ ನಡೆದ ಚುನಾವಣೆಯಲ್ಲಿ ಪ್ರಥಮ ಸೂಚನೆ ದೊರೆತಿದೆ. ಈ ಮೂಲಕ ಜನರು ನಮಗೆ ಮನ್ನಣೆ ನೀಡುತ್ತಿದ್ದಾರೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮೂರು ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡಿದ ಅವರು, "ನಮಗೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಆಶೀರ್ವಾದ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಷ್ಟ್ರೀಯ ನಾಯಕರ ಹೆಸರು ಚುನಾವಣೆಯಲ್ಲಿ ಪ್ರೇರಣೆ ಆಗುತ್ತಿದೆ" ಎಂದಿದ್ದಾರೆ.
"ಬೆಳಗಾವಿಯಲ್ಲಿ ಕಳೆದ ಬಾರಿ ಕಡಿಮೆ ಸೀಟ್ ಇತ್ತು. ಈ ಬಾರಿ ಬೆಳಗಾವಿಯಲ್ಲಿ ನಾವು ಅದ್ಭುತವಾಗಿ ಪ್ರದರ್ಶನ ನೀಡಿದ್ದೇವೆ. ಸ್ಥಿರವಾದ ಆಡಳಿತ ಬೇಕು ಎಂದು ಬಯಸಿ ಮತದಾರರು ನಮಗೆ ಅಧಿಕಾರ ನೀಡಿದ್ದಾರೆ. ಹುಬ್ಬಳ್ಳಿ-ಧಾರವಾಡ ನಮ್ಮ ಕೋಟೆಯಾಗಿದ್ದು, ಅದನ್ನು ನಾವು ಭದ್ರವಾಗಿ ಇಟ್ಟುಕೊಂಡಿದ್ದೇವೆ" ಎಂದು ತಿಳಿಸಿದ್ದಾರೆ.
"ಬಿಜೆಪಿ, ಹುಬ್ಬಳ್ಳಿ- ಧಾರವಾಡದಲ್ಲಿ ಸ್ಪಷ್ಟವಾದ ಬಹುಮತ ಪಡೆದುಕೊಳ್ಳುವ ಸಾಧ್ಯತೆ ಇದೆ. ಕಲಬುರ್ಗಿಯಲ್ಲೂ ಬಹುಮತ ಪಡೆಯುವ ಭರವಸೆ ಇದೆ. ಮೂರು ಕಡೆಗಳಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಅಭಿನಂದನೆಗಳು. ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಅರುಣ್ ಕುಮಾರ್ ಹಾಗೂ ರವಿಕುಮಾರ್ ಅವರು ಚುನಾವಣೆಯ ಜವಾಬ್ದಾರಿ ಹೊತ್ತಿದ್ದು, ಅವರಿಗೆ ಅಭಿನಂದನೆಗಳು" ಎಂದು ಹೇಳಿದ್ದಾರೆ.