ಜಾರ್ಖಂಡ್, ಸೆ 06 (DaijiworldNews/MS): ಜಾರ್ಖಂಡ್ ವಿಧಾನಸಭೆಯ ನೂತನ ಕಟ್ಟಡದಲ್ಲಿ ನಮಾಜ್ ಮಾಡಲು ಪ್ರತ್ಯೇಕ ಕೊಠಡಿಯನ್ನು ಹಂಚಿಕೆ ಮಾಡುವ ಬಗ್ಗೆ ವಿರೋಧ ಪಕ್ಷ ಬಿಜೆಪಿಯೂ ವಿರೋಧಿಸಿ ಪ್ರತಿಭಟನೆ ಮಾಡಿ ಗದ್ದಲ ಉಂಟಾಗಿದ್ದು, ಇದರಿಂದ ಸೋಮವಾರದ ಕಲಾಪಕ್ಕೆ ಅಡ್ಡಿ ಉಂಟಾಯಿತು.
ಅಧಿವೇಶನ ಆರಂಭವಾಗುವ ಮುನ್ನ, ಬಿಜೆಪಿ ಶಾಸಕರು ವಿಧಾನಸೌಧದ ಪ್ರವೇಶದ್ವಾರದಲ್ಲಿ ಮೆಟ್ಟಿಲುಗಳ ಮೇಲೆ ಕುಳಿತು ಹನುಮಾನ್ ಚಾಲೀಸಾ ಮತ್ತು ಹರೇ ರಾಮ ಎಂದು ಘೋಷಣೆಗಳನ್ನು ಕೂಗಿದರು.
ದಿನದ ಕಲಾಪ ಆರಂಭವಾದ ತಕ್ಷಣ, ಬಿಜೆಪಿ ಸದಸ್ಯರು 'ಜೈ ಶ್ರೀ ರಾಮ್' ಎಂದು ಘೋಷಣೆ ಕೂಗುತ್ತಾ ನಮಾಜ್ ಕೊಠಡಿಯ ಹಂಚಿಕೆಗೆ ಸಂಬಂಧಿಸಿದ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿ ಸದನ ಬಾವಿಗಿಳಿದರು.
ಈ ವೇಳೆ ಸ್ಪೀಕರ್ ರವೀಂದ್ರ ನಾಥ್ ಮಹತೋ ಅವರು ಭಾನು ಪ್ರತಾಪ್ ಶಾಹಿ ಸೇರಿದಂತೆ ಪಟ್ಟುಬಿಡದ ಬಿಜೆಪಿ ಸದಸ್ಯರಿಗೆ "ನಿಮ್ಮ ಸ್ಥಾನಗಳಿಗೆ ಹಿಂತಿರುಗಿ. ನೀವು ಉತ್ತಮ ಸದಸ್ಯರಾಗಿದ್ದೀರಿ . ದಯವಿಟ್ಟು ಸಭಾಪತಿಯೊಂದಿಗೆ ಸಹಕರಿಸಿ" ಎಂದು ಹೇಳಿದರು.
ಆದರೆ, ಗದ್ದಲ ಮುಂದುವರಿದಂತೆ, ಸ್ಪೀಕರ್ ಸದನವನ್ನು ಮಧ್ಯಾಹ್ನ 12.45 ಕ್ಕೆ ಮುಂದೂಡಿದರು. ಈ ನಿರ್ಧಾರವನ್ನು ವಿರೋಧಿಸಿ ರಾಜ್ಯದಾದ್ಯಂತ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ಸ್ಪೀಕರ್ ಅವರ ಪ್ರತಿಕೃತಿಗಳನ್ನು ಭಾನುವಾರ ದಹಿಸಿದರು.
ನಮಾಜ್ ಮಾಡಲು ಸ್ಪೀಕರ್ ರೂಮ್ ಸಂಖ್ಯೆ ಟಿಡಬ್ಲ್ಯೂ 348 ಅನ್ನು ಹಂಚಿಕೆ ಮಾಡಿದ್ದಾರೆ, ವಿಧಾನಸಭಾ ಆವರಣದಲ್ಲಿ ಹನುಮಾನ್ ದೇವಸ್ಥಾನ ಮತ್ತು ಇತರ ಧರ್ಮಗಳ ಪ್ರಾರ್ಥನಾ ಸ್ಥಳಗಳನ್ನು ನಿರ್ಮಿಸಲು ಬಿಜೆಪಿಯಿಂದ ಬೇಡಿಕೆ ಬಂದಿದೆ.