ಬೆಂಗಳೂರು, ಸೆ. 06 (DaijiworldNews/PY): "ನಾವು ಬೆಳಗಾವಿಯಲ್ಲಿ ಸರಿಯಾದ ಅಭ್ಯರ್ಥಿಯನ್ನೇ ಹಾಕಿಲ್ಲ. ಆದರೂ ನಮಗೆ ಒಳ್ಳೆಯ ನಂಬರ್ ಬಂದಿರುವ ಬಗ್ಗೆ ಸಮಾಧಾನವಿದೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಸ್ಥಳೀಯ ಚುನಾವಣೆಗಳಲ್ಲಿ ಸ್ಥಳೀಯ ವಿಚಾರಗಳು ಬಹಳ ಮುಖ್ಯ. ನಾವು ಮತದಾರರ ತೀರ್ಪಿಗೆ ತಲೆಬಾಗುತ್ತೇವೆ. ಕಾಂಗ್ರೆಸ್ ಪಾಲಿಕೆ ಚುನಾವಣೆಗೆ ಗೆಲುವು ಸಾಧಿಸದೇ ಇರಬಹುದು. ಆದರೆ, ಸಾಧನೆಯ ಬಗ್ಗೆ ಸಮಾಧಾನವಿದೆ. ಮುಂಬರುವ ದಿನಗಳಲ್ಲಿ ಪಕ್ಷ ಸಂಘಟನೆಗಳನ್ನು ಗಮನಹರಿಸುತ್ತೇವೆ" ಎಂದು ತಿಳಿಸಿದ್ದಾರೆ.
"ಬಿಜೆಪಿ ನಾಯಕರು ಪಾಲಿಕೆ ಚುನಾವಣೆಯಲ್ಲಿ ನಮಗೆ ಪ್ರಚಾರ ಮಾಡಲು ಅವಕಾಶ ಕೊಟ್ಟಿಲ್ಲ. ಬಿಜೆಪಿ ನಾಯಕರು ಅಧಿಕಾರ ದುರ್ಬಳಕೆ ಮಾಡಿಕೊಂಡು ಗೆಲುವು ಸಾಧಿಸಿದ್ದಾರೆ. ಎಷ್ಟು ಅಗತ್ಯ ಅಷ್ಟು ನಾವು ಪ್ರಚಾರ ಮಾಡಿದ್ದೇವೆ. ಹಾಗಾಗಿ, ನಮಗೆ ಒಳ್ಳೆಯ ನಂಬರ್ ದೊರೆತಿದ್ದು, ಈ ಬಗ್ಗೆ ನಮಗೆ ಸಮಾಧಾನವಿದೆ" ಎಂದು ಹೇಳಿದ್ದಾರೆ.
"ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ 15 ವರ್ಷಗಳಿಂದ ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲ. ಆದರೆ, ಈ ಬಾರಿ ಉತ್ತಮ ಫಲಿತಾಂಶ ಬಂದಿದೆ. ಹಲವು ಕಡೆಗಳಲ್ಲಿ ಬಂಡಾಯ ಅಭ್ಯರ್ಥಿಗಳು ಗೆದ್ದಿದ್ದಾರೆ" ಎಂದಿದ್ದಾರೆ.