ಹರ್ಯಾಣ, ಸೆ 06 (DaijiworldNews/MS): ಹೆಣ್ಣು ಮಕ್ಕಳ ಮೇಲೆ ಆಸಿಡ್ ದಾಳಿ ನಡೆಸಿ ದೌರ್ಜನ್ಯ ಎಸಗಿರುವ ಪ್ರಕರಣ ಹಲವಾರು ಕಡೆ ವರದಿಯಾಗುತ್ತಿರುತ್ತದೆ. ಆದ್ರೆ ಇಲ್ಲೊಂದು ಪ್ರಕರಣದಲ್ಲಿ ಯುವತಿಯೇ ಯುವಕನ ಮೇಲೆ ಆಸಿಡ್ ದಾಳಿ ನಡೆಸಿರುವ ಘಟನೆ ವರದಿಯಾಗಿದೆ. ಯುವಕನ ದೂರಿನ ಮೇರೆಗೆ, ಮನಿಷಾ (19) ಎಂಬ ಆರೋಪಿ ಯುವತಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ದೂರುದಾರನಾದ 23 ವರ್ಷದ ಯುವಕ ಶುಭಂಗೆ ಶುಕ್ರವಾರ ಸಂಜೆ ಹರ್ಯಾಣದ ಹಿಸಾರ್ ನಲ್ಲಿ ಗೆಳತಿ ಮನಿಷಾ ಆಸಿಡ್ ಎರಚಿದ್ದಾಳೆ. ಮನೀಷಾಳು ಶುಭಂ ನ ದೂರದ ದೂರದ ಸಂಬಂಧಿಯೊಬ್ಬರ ಮಗಳಾಗಿದ್ದು ಒಮ್ಮೆ ಅಥವಾ ಎರಡು ಬಾರಿ ಭೇಟಿಯಾದ ನಂತರ, ಮನೀಷಾ ತನ್ನನ್ನು ಮದುವೆಯಾಗಲು ಕೇಳಿಕೊಂಡಿದ್ದಾಳೆ. ಆದರೆ ತನ್ನ ಕುಟುಂಬದ ಒಪ್ಪಿಗೆಯಿಲ್ಲದೆ ಮದುವೆಯಾಗುವುದಿಲ್ಲ ಎಂದು ತಿಳಿಸಿದ್ದರಿಂದ ಈ ದಾಳಿ ನಡೆಸಲಾಗಿದೆ ಎಂದು ಶುಭಂ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಆದರೆ ಹಿಸಾರ್ನ ಸೂರ್ಯ ನಗರ ಪ್ರದೇಶದ ನಿವಾಸಿಯಾದ ಆರೋಪಿತ ಯುವತಿ, ಸಹೋದರಿಯ ಕೆಲವು ಆಕ್ಷೇಪಾರ್ಹ ಚಿತ್ರಗಳನ್ನು ಶುಭಂ ಹೊಂದಿದ್ದು ಅದನ್ನು ಅಳಿಸಬೇಕೆಂದು ಬಯಸಿ ಸಿಟ್ಟಿಗೆದ್ದು ದಾಳಿ ನಡೆಸಿದ್ದಾಳೆ ಎಂದು ವರದಿಯೊಂದು ತಿಳಿಸಿದೆ.
ಶುಭಂ ಅವರ ದೂರಿನ ಆಧಾರದ ಮೇಲೆ, ಭಾರತೀಯ ದಂಡ ಸಂಹಿತೆ ಸೆಕ್ಷನ್ 326 A ಅಡಿಯಲ್ಲಿ ಪ್ರಕರಣ ದಾಖಲಿಸಿ ಮನಿಷಾಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.