ಬೆಂಗಳೂರು, ಸೆ. 06 (DaijiworldNews/PY): "ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಸಿಎಂ ಎಂದು ಟವಲ್ ಹಾಕಿಕೊಂಡಿದ್ದವರು ತಮ್ಮ ಸಿಎಂ ಟವಲ್ ತೆಗೆದುಹಾಕಿ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಲೇವಡಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದ ಮೂರು ಮಹಾನಗರ ಪಾಲಿಕೆಗಳು ಕೆಲವು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಫಲಿತಾಂಶದಲ್ಲಿ ಬಿಜೆಪಿ ಹೆಚ್ಚು ಸ್ಥಾನಪಡೆದುಕೊಂಡಿದ್ದು, ಗೆದ್ದಿದೆ. ಬಿಜೆಪಿಗೆ ಮತ ಹಾಕಿದ ಮತದಾರರಿಗೆ ಧನ್ಯವಾದಗಳು" ಎಂದು ಹೇಳಿದ್ದಾರೆ.
"ವಿಪಕ್ಷ ನಾಯಕ ಸಿದ್ದರಾಮ್ಯಯ ಅವರು ಎಲ್ಲೂ ಪ್ರವಾಸ ಮಾಡಿಲ್ಲ. ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಅವರು ಸೋತಿದ್ದಾರೆ ಎನ್ನುವ ಸಂದೇಶ ಸಾರುವಲ್ಲಿ ಅವರು ಯಶಸ್ವಿಯಾಗಿದ್ದಾರೆ" ಎಂದು ವ್ಯಂಗ್ಯವಾಡಿದ್ದಾರೆ.
"ಬೆಳಗಾವಿಯಲ್ಲಿ ಒಂದು ಸಂದೇಶ ನೀಡಬೇಕು ಎನ್ನುವ ನಿಟ್ಟಿನಲ್ಲಿ ನಾವು ಅಭ್ಯರ್ಥಿಗಳನ್ನು ಹಾಕಿದ್ದೆವು. ಅದರಲ್ಲಿ ನಾವು ಸಫಲರಾಗಿದ್ದೇವೆ. ನಮಗೆ ಎಲ್ಲರ ಪರಿಶ್ರಮದ ಪರಿಣಾಮ ಯಶಸ್ಸು ದೊರೆತಿದೆ. ಕಾರ್ಯಕರ್ತರ ಶ್ರಮದಿಂದ ನಮಗೆ ಗೆಲುವು ದೊರಕಿದೆ" ಎಂದಿದ್ದಾರೆ.
"ಯಡಿಯೂರಪ್ಪ ಅವರ ಮಾರ್ಗದರ್ಶನ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರಕ್ಕೆ ಜನ ಮನ್ನಣೆ ನೀಡಿದ್ದಾರೆ. ಪ್ರಧಾನಿ ಮೋದಿ ಸರ್ಕಾರದ ಸಾಧನೆಗಳು, ಯಡಿಯೂರಪ್ಪ ಅವರ ಎರಡು ವರ್ಷಗಳ ಅಧಿಕಾರ ಹಾಗೂ ಸಿಎಂ ಬೊಮ್ಮಾಯಿ ಅವರ ಅಮೃತ ಕಲ್ಪನೆಯ ಯೋಜನೆಗಳಿಗೆ ಜನರ ಬೆಂಬಲ ಸಿಕ್ಕಿದೆ" ಎಂದು ಹೇಳಿದ್ದಾರೆ.
"ನಾವು ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸಿದ್ದೇವೆ. ರಾಜ್ಯದಲ್ಲಿ ಸಿಎಂ ನಾಯಕತ್ವ ಎಂದು ತಿಳಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆದೇಶದಂತೆ ನಾವು ಬಸವರಾಜ ಬೊಮ್ಮಾಯಿ ಅವರ ನಾಯಕತ್ವದಲ್ಲಿ ಒಟ್ಟಾಗಿ ಮುಂದುವರಿಯುತ್ತೇವೆ" ಎಂದಿದ್ದಾರೆ.
ಬೆಲೆ ಏರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಬೇರೆ ಬೇರೆ ಕಾರಣಗಳಿಂದ ಬೆಲೆ ಏರಿಕೆಯಾಗಿದೆ. ಬೆಲೆ ನಿಯಂತ್ರಣ ಮಾಡಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಜಗತ್ತಿನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಆದರೆ, ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ" ಎಂದು ಹೇಳಿದ್ದಾರೆ.