ಲಕ್ನೋ, ಸೆ. 06 (DaijiworldNews/PY): ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ರಕ್ತ ಹೀರುವ ರಾಕ್ಷಸನಿಗೆ ಹೋಲಿಕೆ ಮಾಡಿ ಹೇಳಿಕೆ ನೀಡಿದ್ದ ಉತ್ತರ ಪ್ರದೇಶ ಮಾಜಿ ರಾಜ್ಯಪಾಲ ಅಜೀಜ್ ಖರೇಷಿ ಅವರ ವಿರುದ್ದ ಪ್ರಕರಣ ದಾಖಲಾಗಿದೆ.
ಬಿಜೆಪಿ ನಾಯಕ ಆಕಾಶ್ ಕುಮಾರ್ ಸಕ್ಸೇನಾ ನೀಡಿದ ದೂರಿನ ಮೇರೆಗೆ ರಾಮಪುರ ಜಿಲ್ಲೆಯ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ದೂರಿನಲ್ಲಿ, "ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ರಕ್ಷ ಹೀರುವ ರಾಕ್ಷಸ ಎಂದು ಖುರೇಷಿ ಅವರು ಹೇಳಿಕೆ ನೀಡಿದ್ದಾರೆ" ಎಂದು ಸಕ್ಸೇನಾ ಉಲ್ಲೇಖಿಸಿದ್ದಾರೆ.
ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಅವರ ಮನೆಗೆ ಭೇಟಿ ನೀಡಿದ ಸಂದರ್ಭ ಅವರ ಪತ್ನಿ ತಾಝೀನ್ ಫತ್ಮಾ ಅವರೊಂದಿಗೆ ಸಮಾಲೋಚನೆ ನಡೆಸಿದ್ದು, ಈ ವೇಳೆ ಖುರೇಷಿ ಅವರು ಈ ಹೇಳಿಕೆ ನೀಡಿದ್ದಾರೆ.
"ಖುರೇಷಿ ಅವರು ನೀಡಿರುವ ಹೇಳಿಕೆಯಿಂದ ಎರಡು ಸಮುದಾಯಗಳ ನಡುವೆ ಸಂಘರ್ಷ ಸೃಷ್ಟಿಯಾಗಲಿದೆ" ಎಂದು ಸಕ್ಸೇನಾ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
"ಖುರೇಷಿ ಅವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು" ಎಂದು ಪೊಲೀಸರು ಹೇಳಿದ್ದಾರೆ.