ಬೆಂಗಳೂರು, ಸೆ. 06 (DaijiworldNews/PY): "ತಾಂತ್ರಿಕಾ ಸಲಹಾ ಸಮಿತಿ ಹಾಗೂ 6-12ನೇ ತರಗತಿಯವರೆಗೆ ಶಾಲೆಗಳು ನಡೆದ ಅನುಭವಗಳ ಆಧಾರದ ಮೇಲೆ 1ನೇ ತರಗತಿಯಿಂದ ಶಾಲಾರಂಭಕ್ಕೆ ತೀರ್ಮಾನ ಕೈಗೊಳ್ಳಲಾಗುವುದು" ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ರಾಜ್ಯದ ಕೆಲವು ಹಳ್ಳಿಗಳಲ್ಲಿ ಶೂನ್ಯ ಕೊರೊನಾ ಪಾಸಿಟಿವ್ ಪ್ರಕರಣಗಳಿದ್ದು, ಶಿಕ್ಷಕರು ಸೇರಿದಂತೆ ಪೋಷಕರು ಹಾಗೂ ಸಾರ್ವಜನಿಕರು ಅಂತಹ ಕಡೆಗಳಲ್ಲಿ ಶಾಲೆಗಳನ್ನು ಆರಂಭ ಮಾಡುವಂತೆ ಬೇಡಿಕೆಯಿಟ್ಟ ಹಿನ್ನೆಲೆ ಇಂದು 6-8ನೇ ತರಗತಿವರೆಗೆ ಶಾಲೆಗಳನ್ನು ತೆರೆಯುತ್ತಿದ್ದೇವೆ" ಎಂದಿದ್ದಾರೆ.
"ಇಂದಿನಿಂದ ಮೂರು ದಿನಗಳ ಕಾಲ ಶಾಲೆಗಳನ್ನು ನಡೆಸಿದ ಬಳಿಕ ಗಣೇಶ ಹಬ್ದ ಹಿನ್ನೆಲೆ ಮೂರು ದಿನ ರಜೆ ಸಿಗುತ್ತದೆ. ಆ ವೇಳೆ, ಪೋಷಕರು ಸೇರಿದಂತೆ ಶಿಕ್ಷಕರು ಹಾಗೂ ಮಕ್ಕಳಿಂದ ಅಭಿಪ್ರಾಯ ಸಿಗುತ್ತದೆ. ಈ ಅಭಿಪ್ರಾಯದ ಮೇರೆಗೆ ಮುಂದಿನ ಸೋಮವಾರದಿಂದ ಯೋಜನೆ ರೂಪಿಸುತ್ತೇವೆ" ಎಂದು ತಿಳಿಸಿದ್ದಾರೆ.
"ಶಾಲೆಗಳು ಪುನರಾರಂಭವಾದ ಕೆಲವು ದಿನಗಳ ನಂತರ ತಾಂತ್ರಿಕಾ ಸಲಹಾ ಸಮಿತಿಯ ಸಲಹೆ-ಸೂಚನೆಗಳನ್ನು ಕೇಳಿಕೊಂಡು ಅದರನ್ವಯ ತೀರ್ಮಾನ ತೆಗೆದುಕೊಳ್ಳಲಾಗುವುದು. ಸದ್ಯ ರಾಜ್ಯದ ಮೂರು ಜಿಲ್ಲಗಳನ್ನು ಹೊರತುಪಡಿಸಿದರೆ ಬೇರೆ ಎಲ್ಲಿಯೂ ಕೊರೊನಾ ಬಗ್ಗೆ ಆತಂಕಪಡುವ ಸ್ಥಿತಿಯಲ್ಲಿಲ್ಲ" ಎಂದಿದ್ದಾರೆ.
ಶಿಕ್ಷಕರ ನೇಮಕಾತಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಕಳೆದ ಒಂದೂವರೆ ವರ್ಷದಿಂದ ಕೊರೊನಾ ಸೇರಿದಂತೆ ಬೇರೆ ಕಾರಣಗಳಿಂದ ಶಿಕ್ಷಕರ ನೇಮಕಾತಿ ಮಾಡಲು ಆಗಲಿಲ್ಲ. ಈ ಬಗ್ಗೆ ಸಿಎಂ ಅವರನ್ನು ಕೇಳಿದ ಸಂದರ್ಭ ಅವರು ಐದು ಸಾವಿರ ಶಿಕ್ಷಕರ ನೇಮಕಾತಿಗೆ ಒಪ್ಪಿಗೆ ನೀಡಿದ್ದಾರೆ" ಎಂದು ತಿಳಿಸಿದ್ದಾರೆ.