ನಾಗ್ಪುರ, 06 (DaijiworldNews/MS): ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಮುಂಬೈನ ಪಂಚತಾರಾ ಹೋಟೆಲ್ನಲ್ಲಿ ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಸೋಮವಾರ ಮಹತ್ವದ ಸಭೆ ನಡೆಸಲಿದ್ದಾರೆ. ಈ ನಡುವೆ, ನಾಗ್ಪುರದಲ್ಲಿ ಸೆಪ್ಟೆಂಬರ್ 3 ರಂದು ಆರಂಭವಾದ ಮೂರು ದಿನಗಳ ಸಮನ್ವಯ ಸಭೆ ಭಾನುವಾರ ಕೊನೆಗೊಳ್ಳಲಿದೆ.
ಪ್ರತಿ ವರ್ಷ, ಸೆಪ್ಟೆಂಬರ್ನಲ್ಲಿ ಸಂಘದ ದೊಡ್ಡಮಟ್ಟದಲ್ಲಿ ಸಮನ್ವಯ ಸಭೆ ನಡೆಯುತ್ತದೆ. ಆದಾಗ್ಯೂ, ಕಳೆದ ವರ್ಷದಿಂದ, ಕೋವಿಡ್ ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ಸಭೆಯನ್ನು ಕಡಿಮೆ ಮಟ್ಟದಲ್ಲಿ ನಡೆಸಲಾಗುತ್ತಿದೆ.
ಗಮನಾರ್ಹವಾದ ವಿಚಾರವೆಂದರೆ ಈ ಹಿಂದೆ ಜುಲೈನಲ್ಲಿ, ಭಾಗವತ್ ಅವರು ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಮುಸ್ಲಿಂ ರಾಷ್ಟ್ರೀಯ ಮಂಚ್ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ , "ಹಿಂದೂ-ಮುಸ್ಲಿಂ ಐಕ್ಯತೆಯ ಪರಿಕಲ್ಪನೆಯನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ. ಏಕೆಂದರೆ ಹಿಂದೂ - ಮುಸ್ಲಿಂರ ನಡುವೆ ಯಾವುದೇ ವ್ಯತ್ಯಾಸವಿಲ್ಲ. 40,000 ವರ್ಷಗಳಿಂದ ನಮ್ಮ ಪೂರ್ವಜರ ಒಂದೇ ವಂಶಸ್ಥರು ಎಂದು ಸಾಬೀತಾಗಿದೆ. ಭಾರತದಲ್ಲಿ ಹಿಂದೂ ಅಥವಾ ಮುಸ್ಲಿಮರು ಪ್ರಾಬಲ್ಯ ಹೊಂದಿರಲು ಸಾಧ್ಯವಿಲ್ಲ ಇಲ್ಲಿ ಭಾರತೀಯರು ಪ್ರಾಬಲ್ಯ ಹೊಂದಿರಲು ಮಾತ್ರ ಸಾಧ್ಯ ಎಂದು ಹೇಳಿದ್ದರು.
ಇನ್ನು ಇಂದು ನಡೆಯುವ ಈ ಸಭೆಯಲ್ಲಿ, ಸಂಘದ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿಶ್ವ ಹಿಂದೂ ಪರಿಷತ್, ವಿದ್ಯಾರ್ಥಿ ಪರಿಷತ್, ಭಾರತೀಯ ಮಜ್ದೂರ್ ಸಂಘ ಮತ್ತು ವಿದ್ಯಾ ಭಾರತಿಯಂತಹ ಸಂಬಂಧಿತ ಸಂಸ್ಥೆಗಳು ಹಾಜರಿರುತ್ತಾರೆ. ಮುಂಬರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಕಾರ್ಯತಂತ್ರವು ಸಭೆಯಲ್ಲಿ ಪ್ರಮುಖ ಕಾರ್ಯಸೂಚಿಗಳಲ್ಲಿ ಒಂದಾಗಿದೆ ಎನ್ನಲಾಗಿದೆ.