ಕೋಲ್ಕತ್ತಾ, ಸೆ. 05 (DaijiworldNews/SM): ಪಶ್ಚಿಮ ಬಂಗಾಳದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಸಮರ ನಡೆಯಲಿದೆ. ಈ ಮೂರು ಕ್ಷೇತ್ರಗಳಿಗೆ ಆಡಳಿತರೂಢ ಟಿಎಂಸಿ ಪಕ್ಷ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಈ ಪೈಕಿ ಸಿಎಂ ಮಮತಾ ಬ್ಯಾನರ್ಜಿ ಅವರ ಹೆಸರು ಕೂಡ ಸೇರಿಕೊಂಡಿದೆ.
ಪಶ್ಚಿಮ ಬಂಗಾಳದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಸೆಪ್ಟೆಂಬರ್ 30ಕ್ಕೆ ಉಪಚುನಾವಣೆ ನಿಗದಿಯಾಗಿದೆ. ಉಪ ಸಮರ ಘೋಷಣೆಯಾಗುತ್ತಿದ್ದಂತೆ ಟಿಎಂಸಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಭವಾನಿಪುರ ಕ್ಷೇತ್ರದಿಂದ ಮಮತಾ ಬ್ಯಾನರ್ಜಿ ಕಣಕ್ಕಿಳಿದಿದ್ದಾರೆ. ಇನ್ನುಳಿದ ಎರಡು ಕ್ಷೇತ್ರಗಳಾದ ಮುರ್ಷಿದಾಬಾದ್ನ ಜಂಗೀಪುರ ಕ್ಷೇತ್ರದಲ್ಲಿ ಮಾಜಿ ಸಚಿವ ಜಾಕಿರ್ ಹುಸೇನ್, ಸಮ್ಸೇರ್ಗಂಜ್ ಕ್ಷೇತ್ರದಿಂದ ಅಮಿರುಲ್ ಇಸ್ಲಾಂ ಕಣಕ್ಕೆ ಇಳಿಸಲಾಗಿದೆ ಎಂದು ಪಕ್ಷ ತಿಳಿಸಿದೆ.
ಎರಡೂ ಕ್ಷೇತ್ರಗಳ ಶಾಸಕರು ಕೋವಿಡ್ನಿಂದಾಗಿ ಸಾವನ್ನಪ್ಪಿದ್ದಾರೆ. ಹೀಗಾಗಿ ಉಪಚುನಾವಣೆ ನಡೆಯುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ವಕ್ಷೇತ್ರ ಭವಾನಿಪುರದಲ್ಲಿ ಸ್ಪರ್ಧಿಸಿರಲಿಲ್ಲ. ಬದಲಾಗಿ ನಂದಿಗ್ರಾಮ ಕ್ಷೇತ್ರದಲ್ಲಿ ಸ್ಪರ್ಧಿಸಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಸೋಲನ್ನುಂಡಿದ್ದರು. ಬಳಿಕ ಮಮತಾ ಬ್ಯಾನರ್ಜಿ ಮೇ 5ಕ್ಕೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು. ಆದರೆ ನವೆಂಬರ್ 5ರ ಒಳಗೆ ವಿಧಾನಸಭೆಗೆ ಆಯ್ಕೆಯಾಗಬೇಕಿದೆ. ಈ ಹಿನ್ನೆಲೆಯಿಂದಾಗಿ ಮಮತಾ ಬ್ಯಾನರ್ಜಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡಲು ಭವಾನಿಪುರದ ಶಾಸಕ ಸ್ಥಾನಕ್ಕೆ ಶೋಭನ್ದೇವ್ ಚಟ್ಟೋಪಾಧ್ಯಾಯ ರಾಜೀನಾಮೆ ನೀಡಿದ್ದರು.