ಕೋಲ್ಕತಾ, ಸೆ. 05 (DaijiworldNews/SM): ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪ ಎದುರಿಸಿರುವ ತೃಣಮೂಲ ಕಾಂಗ್ರೆಸ್ ಹಿರಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಪ್ರತಿಕ್ರಿಯೆ ನೀಡಿದ್ದು, ತನ್ನ ವಿರುದ್ಧ ಆರೋಪ ಸಾಬೀತಾದರೆ, ಸಾರ್ವಜನಿಕವಾಗಿ ನೇಣು ಹಾಕಿಕೊಳ್ಳುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಯಾವ ಕಾನೂನುಬಾಹಿರ ವಹಿವಾಟಿನಲ್ಲಿ ಭಾಗಿಯಾಗಿರುವುದನ್ನು ಕೇಂದ್ರ ತನಿಖಾ ಸಂಸ್ಥೆಗಳು ಸಾಬೀತುಪಡಿಸಲಿ. ಟಿಎಂಸಿ ಸಂಸದನಿಗೆ ಕಲ್ಲಿದ್ದಲು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ಸಮನ್ಸ್ ನೀಡಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆ ಎದುರಿಸಲು ಅವರು ದೆಹಲಿಗೆ ಪ್ರಯಣ ನಡೆಸಿದ್ದಾರೆ. ಈ ವೇಳೆ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಚುನಾವಣೆಯಲ್ಲಿನ ಸೋಲಿನ ಹಿನ್ನೆಲೆಯಲ್ಲಿ ಬಿಜೆಪಿ ರಾಜಕೀಯ ಸೇಡು ತೀರಿಸಿಕೊಳ್ಳಲು ಇಂತಹ ಕಾರ್ಯ ನಡೆಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ನನ್ನ ವಿರುದ್ಧ ಹತ್ತು ಪೈಸೆಯ ಅಕ್ರಮ ವಹಿವಾಟಿನ ಆರೋಪ ವ್ಯಕ್ತವಾದರೂ ನಾನು ಸಾರ್ವಜನಿಕವಾಗಿ ನೇಣು ಹಾಕಿಕೊಳ್ಳುತ್ತೇನೆ. ನನಗೆ ಯಾವುದೇ ತನಿಖೆಯ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.