ನವದೆಹಲಿ, ಸೆ. 05 (DaijiworldNews/PY): ಆರ್ಎಸ್ಎಸ್ಗೆ ತಾಲಿಬಾನ್ ಅನ್ನು ಹೋಲಿಕೆ ಮಾಡಿದ್ದ ಬಾಲಿವುಡ್ನ ಖ್ಯಾತ ಗೀತ ಸಾಹಿತಿ ಜಾವೇದ್ ಅಖ್ತರ್ ಅವರಿಗೆ ಬಿಜೆಪಿ ಶಾಸಕ ರಾಮ್ ಕದಮ್ ಎಚ್ಚರಿಕೆ ನೀಡಿದ್ದಾರೆ.
ಟ್ವಿಟರ್ನಲ್ಲಿ ವಿಡಿಯೋ ಮಾಡಿರುವ ಅವರು, "ಅಖ್ತರ್ ಹೇಳಿಕೆಗಳು ನಾಚಿಕೆಗೇಡು. ಅವರು ಸಂಘ ಪರಿವಾರದ ಹಾಗೂ ವಿಶ್ವ ಹಿಂದೂ ಪರಿಷತ್ನ ಕೋಟ್ಯಂತರ ಕಾರ್ಯಕರ್ತರಿಗೆ ಅವಮಾನ ಮಾಡಿದ್ದಾರೆ. ಅವರು ಸೂಕ್ತ ರೀತಿಯಲ್ಲಿ ಕ್ಷಮೆ ಕೇಳದೇ ಇದ್ದಲ್ಲಿ ಅವರ ಯಾವುದೇ ಸಿನಿಮಾಗಳನ್ನು ಬಿಡುಗಡೆ ಆಗದಂತೆ ಮಾಡುತ್ತೇವೆ" ಎಂದು ಕಿಡಿಕಾರಿದ್ದಾರೆ.
"ದೇಶದ ಹಲವು ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿದೆ. ಅಲ್ಲಿನ ನಾಯಕರು ರಾಜಧರ್ಮ ಪಾಲನೆ ಮಾಡುತ್ತಿದ್ದಾರೆ. ಅಲ್ಲಿನ ಸ್ಥಿತಿಗತಿಗಳು ಅರಾಜಕತೆಯಿಂದ ಕೂಡಿಲ್ಲ ಎನ್ನುವುದನ್ನು ಅಖ್ತರ್ ಗಮನಿಸಬೇಕು. ಅವರು ತಾಯಿ ಭರತಿಯ ನೆಲಕ್ಕೆ ಕೈಮುಗಿದು ಕ್ಷಮೆ ಕೇಳಬೇಕು" ಎಂದಿದ್ದಾರೆ.
ಮಹಾರಾಷ್ಟ್ರ ಬಿಜೆಪಿ ಘಟಕದ ಕಾನೂನು ವಿಭಾಗದ ಸಲಹೆಗಾರ ಅಶುತೋಷ್ ದುಬೆ ಅವರು ಅಖ್ತರ್ ವಿರುದ್ದ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ. ಅಖ್ತರ್ ಅವರು ಉದ್ದೇಶಪೂರ್ವಕವಾಗಿ ಆರ್ಎಸ್ಎಸ್ನ ಹೆಸರು ಕೆಡಿಸಲು ಯತ್ನಿಸಿದ್ದಾರೆ ಎಂದು ದೂರಿದ್ದಾರೆ.