ಬೆಂಗಳೂರು, ಸೆ. 05 (DaijiworldNews/PY): ರಾಜ್ಯದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಮೂರು ದಿನ ಮಾತ್ರ ಗಣೇಶೋತ್ಸವಕ್ಕೆ ಅವಕಾಶ ನೀಡಲಾಗಿದೆ.
ಭಾನುವಾರ ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಗಣೇಶೋತ್ಸವಕ್ಕೆ ಅವಕಾಶ ನೀಡಲಾಗಿದ್ದು, ಸಾರ್ವಜನಿಕ ಗಣೇಶ ಹಬ್ಬ ಆಚರಣೆಗೆ ಷರತ್ತುಬದ್ಧ ಅನುಮತಿ ನೀಡಲಾಗಿದೆ.
ಸಾರ್ವಜನಿಕ ಗಣೇಶೋತ್ಸವ ಕೇವಲ ಮೂರು ದಿನ ಮಾತ್ರ ಅವಕಾಶ ನೀಡಲಾಗಿದೆ. ಆದರೆ, ಮೆರವಣಿಗೆ, ಮನರಂಜನೆ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ ಎಂದು ತಿಳಿಸಲಾಗಿದೆ.
ಸಿಎಂ ಬಸವರಾಜ ಬೊಮ್ಮಾಯಿ ಅವರು, ತಾಂತ್ರಿಕ ಸಲಹಾ ಸಮಿತಿಯ ವರದಿಯನ್ನು ಆಧರಿಸಿ ಈ ತೀರ್ಮಾನ ಕೈಗೊಂಡಿದ್ದು, ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಹಿನ್ನೆಲೆ ಮೂರು ದಿನ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡಲಾಗಿದ್ದು, ಮೆರವಣಿಗೆಗೆ ಅವಕಾಶ ಇಲ್ಲ ಎಂದು ಹೇಳಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದರೂ ಕೂಡಾ ಅದು ಸರಳವಾಗಿಯೇ ಇರಬೇಕು. ಅದ್ದೂರಿ ಆಚರಣೆಗೆ ಅವಕಾಶವಿಲ್ಲ. ಜಿಲ್ಲಾಡಳಿತ ಸೂಚಿಸಿದ ಸ್ಥಳದಲ್ಲಿಯೇ ಗಣೇಶ ವಿಸರ್ಜನೆ ಮಾಡಬೇಕು ಎಂದು ತಿಳಿಸಲಾಗಿದೆ.
ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯವಾಗಿದ್ದು, ಬಿಬಿಎಂಪಿ, ಜಿಲ್ಲಾಡಳಿತದ ಅನುಮತಿ ಪಡೆಯಬೇಕು ಎಂದು ಹೇಳಿದ್ದಾರೆ.