ಹುಬ್ಬಳ್ಳಿ, ಸ.05 (DaijiworldNews/HR): ತಮಿಳುನಾಡು ಸರ್ಕಾರವು ಮೇಕೆದಾಟು ಯೋಜನೆಯನ್ನು ವಿನಾಕಾರಣ ಅಡ್ಡಿಪಡಿಸುತ್ತಿದೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮೇಕೆದಾಟು ಯೋಜನೆಯಲ್ಲಿ ನಾವು ಹೆಚ್ಚಿನ ನೀರನ್ನು ತೆಗೆದುಕೊಳ್ಳುತ್ತಿಲ್ಲ. ಕುಡಿಯುವ ನೀರಿಗಾಗಿ ಸುಪ್ರೀಂಕೋರ್ಟ್ ಈಗಾಗಲೇ ಆದೇಶ ನೀಡಿದೆ. ನಾವು ನೀರು ಕೇಳ್ತಿರೋದು ಕುಡಿಯೋ ನೀರಿಗಾಗಿ ಹೊರತು ಕೃಷಿಗಾಗಿ ಅಲ್ಲ. ಆದರೆ ತಮಿಳನಾಡು ವಿನಾಕಾರಣ ಅಡ್ಡಿ ಪಡಿಸುತ್ತಿದೆ" ಎಂದರು.
ಇನ್ನು "ತಮಿಳುನಾಡಿನವರು ಈಗಾಗಲೇ ಪಿಐಎಲ್ ಹಾಕಿದ್ದಾರೆ ನಾವು ಕೂಡ ಹಾಕಿದ್ದೇವೆ. ಇದನ್ನು ಕೂಡಲೇ ಇತ್ಯರ್ಥಪಡಿಸಲಿಕ್ಕೆ ಸುಪ್ರೀಂ ಕೋರ್ಟ್ನಲ್ಲಿ ನಾವು ಕಾನೂನು ಪ್ರಕಾರ ಹೋರಾಟ ನಡೆಸುತ್ತೇವೆ" ಎಂದಿದ್ದಾರೆ.
"ಕಳಸಾ ಬಂಡೂರಿ ಯೋಜನೆಯಲ್ಲಿ ನಮಗೆ 13 ಟಿಎಂಸಿ ನೀರು ಸಿಕ್ಕಿದ್ದು, ಅದರಲ್ಲಿ 5.4 ಟಿಎಂಸಿ ನೀರು ಕುಡಿಯೋದಕ್ಕೆ ಮತ್ತು ಉಳಿದದ್ದು ವಿದ್ಯುತ್ ಉತ್ಪಾದನೆಗೆ ಬಳಕೆಯಾಗುತ್ತದೆ" ಎಂದು ಹೇಳಿದ್ದಾರೆ.