ಬೆಂಗಳೂರು, ಸೆ. 05 (DaijiworldNews/PY): ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ, ತುರಾಯಿ ಹಾಗೂ ದುಬಾರಿ ವೆಚ್ಚದ ಉಡುಗೊರೆಗಳನ್ನು ನೀಡುವುದನ್ನು ನಿಷೇಧಿಸಿದ ಆದೇಶವನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಸ್ವತಃ ಉಲ್ಲಂಘಿಸಿದ್ದಾರೆ.
ಭಾನುವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಮುಖ್ಯಮಂತ್ರಿಗಳ ರೈತ ವಿದ್ಯಾ ನಿಧಿ ಯೋಜನೆ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸ್ವತಃ ಸಿಎಂ ಅವರೇ, ರೇಷ್ಮೆ ಗೂಡುಗಳಿಂದ ತಯಾರಾದ ಬೃಹತ್ ಹಾರ, ಮೈಸೂರು ಪೇಟ, ಶಾಲು, ಬೆಳ್ಳಿಯ ಸ್ಮರಣಿಕೆಯನ್ನು ಸ್ವೀಕರಿಸಿದರು. ಸಮಾರಂಭದಲ್ಲಿ ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ಥೋಮರ್ ಹಾಗೂ ಶೋಭಾ ಕರಂದ್ಲಾಜೆ ಅವರನ್ನು ಸನ್ಮಾನಿಸಲಾಯಿತು.
ಕೆಲ ದಿನಗಳ ಹಿಂದೆ ಸಿಎಂ ಬಸವರಾಜ ಬೊಮ್ಮಾಯಿ ಅವರು, ಸರ್ಕಾರದ ವಿವಿಧ ಇಲಾಖೆಗಳು, ಸಂಘ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಹಾರ, ತುರಾಯಿ, ದುಬಾರಿ ಬೆಲೆಯ ಉಡುಗೊರೆ ನೀಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರು. ಅಲ್ಲದೇ, ಇದರ ಬದಲು ಪುಸ್ತಕಗಳನ್ನು ನೀಡಬೇಕು ಎಂದು ಸೂಚಿಸಿದ್ದರು. ಆದರೆ. ಇಂದು ನಡೆದ ಕಾರ್ಯಕ್ರಮದಲ್ಲಿ ಸಿಎಂ ಅವರೇ ಹಾರ, ಶಾಲು, ಬೆಳ್ಳಿಯ ಸ್ಮರಣಿಕೆಗಳನ್ನು ಸ್ವೀಕರಿಸಿ ಆದೇಶ ಉಲ್ಲಂಘಿಸಿದ್ದು, ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ.