ಬೆಂಗಳೂರು, ಸ.05 (DaijiworldNews/HR): ದೇಶದ ಯಾವುದೇ ಯೋಜನೆಯ ರುವಾರಿ ಕರ್ನಾಟಕ ಎಂದು ಕೇಂದ್ರ ಕೃಷಿ ಕಲ್ಯಾಣ ರೈತ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಶ್ಲಾಘಿಸಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಕೃಷಿ ಇಲಾಖೆ ಸಹಯೋಗದಲ್ಲಿ ಕರ್ನಾಟಕ ಸರ್ಕಾರದಿಂದ ಹಮ್ಮಿಕೊಂಡಿದ್ದ ರೈತ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಲೋಕಾರ್ಪಣೆ ಗೊಳಿಸಿ ಬಳಿಕ ಮಾತನಾಡಿದ ಅವರು, "ರೈತರ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಪ್ರತಿವರ್ಷ ಸಹಾಯಧನ ವಿದ್ಯಾರ್ಥಿವೇತನ ನೀಡುವ ದೇಶದ ಮೊದಲ ಯೋಜನೆ ವಿದ್ಯಾನಿಧಿ ಯೋಜನೆ. ಶೇ.75ರಷ್ಟು ಜನ ಮಳೆಯಾಧಾರಿತ ಕೃಷಿ ಮಾಡುತ್ತಿದ್ದಾರೆ" ಎಂದರು.
"ಕಿಸಾನ್ ಸಮ್ಮಾನ್ ಯೋಜನೆ, ಸಾವಯವ ಹನಿನೀರಾವರಿ ಸೇರಿದಂತೆ ಸಣ್ಣ ರೈತನ ಕಲ್ಯಾಣಕ್ಕಾಗಿ ಬಾಡಿಗೆಗೆ ಕೃಷಿ ಯಂತ್ರೋಪಕರಣ ,ಆಹಾರ ಉತ್ಪನ್ನ ಆಹಾರ ಮಾರುಕಟ್ಟೆ ಸೇರಿದಂತೆ ಕೃಷಿ ಉತ್ಪಾದಕರ ಸಂಘದ ಮೂಲಕ ದೇಶದ ಸಣ್ಣ ರೈತ ಲಾಭದಾಯಕನಾಗಲು ಕೃಷಿ ಉದ್ಯಮಿಯಾಗುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ" ಎಂದಿದ್ದಾರೆ.
ಇನ್ನು ತೋಟಗಾರಿಕೆ ಇಲಾಖೆಯೂ ಕೂಡ ಕೃಷಿಯಂತೆ ಕೃಷಿ ವಿಶ್ವವಿದ್ಯಾಲಯವಾಗಬೇಕು. ಕಟ್ಟಕಡೆಯ ರೈತನನ್ನು ಕೂಡ ಯೋಜನೆಗಳು ತಲುಪಬೇಕು ಎಂದು ಹೇಳಿದ್ದಾರೆ.