ಬೆಂಗಳೂರು, ಸೆ. 05 (DaijiworldNews/PY): "ಆನ್ಲೈನ್ ಗೇಮ್ಗಳ ನಿಷೇಧಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿರುವುದು ಸ್ವಾಗತಾರ್ಹ. ಸರ್ಕಾರ ಆದಷ್ಟು ಬೇಗ ಮಸೂದೆ ಜಾರಿಗೆ ತಂದು ನಿಷೇಧ ಮಾಡಲಿ" ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಆನ್ಲೈನ್ ಗೇಮ್ಗಳ ನಿಷೇಧಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿರುವುದು ಸ್ವಾಗತಾರ್ಹ. ಆನ್ಲೈನ್ ಗೇಮ್ಗಳನ್ನು ನಿಷೇಧಿಸುವಂತೆ ನಾನು ಅನೇಕ ಬಾರಿ ಸರ್ಕಾರದ ಗಮನ ಸೆಳೆದಿದ್ದೆ. ಈ ಗೇಮಿಂಗ್ ಆ್ಯಪ್ಗಳ ಮೂಲಕ ಸುಲಭವಾಗಿ ದುಡ್ಡು ಗಳಿಸೋ ಚಟದಿಂದ ಅದೆಷ್ಟೋ ಜನರ ಬದುಕು ಬೀದಿಗೆ ಬಂದಿದೆ. ಸರ್ಕಾರ ಆದಷ್ಟು ಬೇಗ ಮಸೂದೆ ಜಾರಿಗೆ ತಂದು ನಿಷೇಧ ಮಾಡಲಿ" ಎಂದಿದ್ದಾರೆ.
"ಆನ್ಲೈನ್ ಗೇಮ್ಗಳ ನಿಷೇಧ ಕುರಿತಂತೆ ಹೈಕೋರ್ಟ್ನಲ್ಲಿ ಈಗಾಗಲೇ ಪಿಐಎಲ್ ಸಲ್ಲಿಕೆಯಾಗಿದೆ. ಸಾರ್ವಜನಿಕರಿಂದ ಬಂದ ದೂರಿನ ಅನ್ವಯ ನಮ್ಮ ಗುಂಡೂರಾವ್ ಫೌಂಡೇಶನ್ ವತಿಯಿಂದಲೂ ಪಿಐಎಲ್ ಸಲ್ಲಿಸುವ ಚಿಂತನೆಯಿತ್ತು. ಈ ಮಧ್ಯೆ ಸರ್ಕಾರವೇ ಆನ್ಲೈನ್ ಗೇಮ್ ನಿಷೇಧಕ್ಕೆ ಮುಂದಾಗಿರುವುದು ಉತ್ತಮ ನಡೆ. ಸರ್ಕಾರ ಈ ಅಧಿವೇಶನದಲ್ಲಿ ನಿಷೇಧದ ಕುರಿತು ಮಸೂದೆ ಮಂಡಿಸಲಿ" ಎಂದು ಹೇಳಿದ್ದಾರೆ.
"ರಾಜ್ಯದಲ್ಲಿ ಆನ್ಲೈನ್ ಜೂಜು ನಿಷೇಧಕ್ಕೆ ರಾಜ್ಯ ಸರ್ಕಾರ ತೀರ್ಮಾನಿಸಿದೆ" ಎಂದು ಶನಿವಾರ ಸಚಿವ ಮಾಧುಸ್ವಾಮಿ ತಿಳಿಸಿದ್ದರು.
"ಆನ್ಲೈನ್ ಗೇಮ್ ನಿಷೇಧಿಸಲು ನಿರ್ಧಾರ ಕೈಗೊಳ್ಳಲಾಗಿದ್ದು, ಈ ಬಗ್ಗೆ ಸರ್ಕಾರ ಸದನದಲ್ಲಿ ತಿದ್ದುಪಡಿ ಕಾಯ್ದೆ ಮಂಡಿಸಲಿದೆ. ಹಣ ಹೂಡಿಕೆಯ ಆನ್ಲೈನ್ ಆಟಗಳ ವಿರುದ್ದ ಪೊಲೀಸ್ ಕಾಯ್ದೆಯ ಅಡಿಯಲ್ಲಿ ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸಲು ವಿಧಾನ ಮಂಡಲ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುವುದು" ಎಂದಿದ್ದರು.