ಕೋಲ್ಕತ್ತ, ಸೆ. 05 (DaijiworldNews/PY): ಅಂಗರಕ್ಷಕ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಐಡಿ ಪಶ್ಚಿಮ ಬಂಗಾಳದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿಗೆ ಸಮನ್ಸ್ ನೀಡಿದೆ.
ಸೋಮವಾರ ಸಿಐಡಿ ಕಚೇರಿಯಲ್ಲಿ ತನಿಖಾ ಅಧಿಕಾರಿಗಳ ಮುಂದೆ ಹಾಜರಾಗುವಂತೆ ಸುವೇಂದು ಅವರಿಗೆ ಸೂಚನೆ ನೀಡಲಾಗಿದೆ.
ಸುವೇಂದು ಅವರ ಅಂಗರಕ್ಷಕರಾಗಿದ್ದ ಸುಭಬ್ರತಾ ಚಕ್ರವರ್ತಿ ಅವರ ಅಸಹಜ ಸಾವಿನ ಪ್ರಕರಣದ ಕುರಿತು ತನಿಖೆ ನಡೆಸಲು ವಿಶೇಷ ತಂಡವನ್ನು ಸಿಐಡಿ ರಚಿಸಿದೆ.
ಚಕ್ರವರ್ತಿ ಅವರು ಇತ್ತೀಚೆಗೆ ತಮ್ಮ ಸರ್ವಿಸ್ ರಿವಾಲ್ವರ್ನಿಂದ ಗುಂಡು ಹಾರಿಸಿಕೊಂಡಿದ್ದರು. ಚಕ್ರವರ್ತಿ ಅವರ ಪತ್ನಿ ತನ್ನ ಪತಿಯ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಕೊಂಟೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತನಿಖೆಯ ಭಾಗವಾಗಿ ಈವರೆಗೆ ಸಿಐಡಿ 11 ಪೊಲೀಸರು ಸೇರಿ 15 ಮಂದಿಯ ವಿಚಾರಣೆ ನಡೆಸಿದೆ. ಅಲ್ಲದೇ, ಸಿಐಡಿ ತಂಡ ಪುರ್ಬಾ ಮೆದಿನಿಪುರದಲ್ಲಿರುವ ಸುವೇಂದು ಅಧಿಕಾರಿ ನಿವಾಸ ಶಾಂತಿ ಕುಂಜಕ್ಕೆ ಕೂಡಾ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದೆ.
ಚಕ್ರವರ್ತಿಅವರು ರಾಜ್ಯ ಶಸ್ತ್ರಾಸ್ತ್ರ ಪೊಲೀಸ್ ಪಡೆಯಲ್ಲಿದ್ದರು. ಇವರನ್ನು ಸುವೇಂದು ಅಧಿಕಾರಿ ಅವರ ಭದ್ರತೆಗೆ ನಿಯೋಜನೆ ಮಾಡಲಾಗಿತ್ತು. ಚಕ್ರವರ್ತಿ ಅವರು, ಸುವೇಂದು ಅವರು ಟಿಎಂಸಿ ಸಂಸದರಾಗಿದ್ದ ಅವಧಿಯಿಂದಲೂ ಭದ್ರತಾ ತಂಡದಲ್ಲಿದ್ದರು. 2015ರಲ್ಲಿ ಸುವೇಂದು ಅವರು ಸಚಿವರಾದ ನಂತರವೂ ಮುಂದುವರಿದಿದ್ದರು.