ಮೈಸೂರು, ಸೆ. 05 (DaijiworldNews/PY): "ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಒಳಗೊಳ್ಳದೇ ಏಕಪಕ್ಷೀಯವಾಗಿ ಉನ್ನತ ಶಿಕ್ಷಣ ಸಚಿವರು ತೀರ್ಮಾನ ಕೈಗೊಳ್ಳುವುದು ಸೂಕ್ತವಲ್ಲ" ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್. ವಿಶ್ವನಾಥ್ ಹೇಳಿದ್ದಾರೆ.
ಮೈಸೂರಿನ ಸೆಂಟ್ ಮಥಾಯಿಸ್ ಸಭಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಭಾನುವಾರ ಶಿಕ್ಷಣ ದಿನಾಚರಣೆಯಲ್ಲಿ ಅವರು ಮಾತನಾಡಿದರು.
"ಬೇರು ಅತ್ಯಂತ ಮುಖ್ಯವಾಗಿದ್ದು, ಬೇರುಗಳನ್ನು ಕಡೆಗಣಿಸಿ ಕೊಂಬೆಗಳನ್ನು ಸುಧಾರಿಸಲು ಹೊರಟರೆ ಏನೂ ಪ್ರಯೋಜನವಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಶಿಕ್ಷಕರ ದಿನಾಚರಣೆಯ ವೇಳೆ ವಿಸ್ತೃತ ಚರ್ಚೆ ನಡೆಯಬೇಕಿತ್ತು" ಎಂದಿದ್ದಾರೆ.
ಈ ವೇಳೆ ಮಾತನಾಡಿದ ಶಾಸಕ ತನ್ವೀರ್ ಸೇಠ್, "ಉನ್ನತ ಶಿಕ್ಷಣ ಸಚಿವರು ಅವಸರವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲು ಹೊರಟಿರುವುದು ಸೂಕ್ತವಲ್ಲ. ಅವಸರವೇ ಅಪಘಾತಕ್ಕೆ ಕಾರಣ ಎನ್ನುವುದನ್ನು ಮರೆಯಬಾರದು" ಎಂದು ಹೇಳಿದ್ದಾರೆ.