ನವದೆಹಲಿ, ಸ.05 (DaijiworldNews/HR): ಬ್ರಾಹ್ಮಣ ಸಮುದಾಯದ ಮತಗಳನ್ನು ಸೆಳೆಯಲು ರಾಮ ಮಂದಿರ, ಹಿಂದೂ ಜಾಗೃತಿ ಬಳಸಿಕೊಳ್ಳುವ ಬಿಜೆಪಿಯು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬ್ರಾಹ್ಮಣ ಅಭ್ಯರ್ಥಿಯನ್ನೇ ಮುಖ್ಯಮಂತ್ರಿ ಎಂದು ಘೋಷಿಸಲಿ ಎಂದು ಕಾಂಗ್ರೆಸ್ ಮಾಧ್ಯಮ ವಕ್ತಾರ ಲಲನ್ ಕುಮಾರ್ ಸವಾಲೆಸೆದಿದ್ದಾರೆ.
ಸಾಂಧರ್ಭಿಕ ಚಿತ್ರ
ಈ ಕುರಿತು ಮಾತನಾಡಿರುವ ಅವರು, "ಇದುವರೆಗೂ ಉತ್ತರಪ್ರದೇಶದಲ್ಲಿ ಅತಿಹೆಚ್ಚಿನ ಬ್ರಾಹ್ಮಣ ಮುಖ್ಯಮಂತ್ರಿಗಳನ್ನು ಕೊಟ್ಟಿರುವುದು ಕಾಂಗ್ರೆಸ್ ಮಾತ್ರವೇ. ಉಳಿದ ಪಕ್ಷಗಳು ಬ್ರಾಹ್ಮಣರ ಮತಕ್ಕಾಗಿ ಡ್ರಾಮಾಗಳನ್ನು ಮಾಡುತ್ತಿವೆ" ಎಂದು ಆರೋಪಿಸಿದ್ದಾರೆ.
ಇನ್ನು "ಉತ್ತರಪ್ರದೇಶದ 403 ವಿಧಾನಸಭೆ ಕ್ಷೇತ್ರಗಳಲ್ಲಿ ಬ್ರಾಹ್ಮಣ ಸಮುದಾಯ ಉದ್ದೇಶಿಸಿ ಸರಣಿ ಸಮ್ಮೇಳನಗಳನ್ನು ಹಮ್ಮಿಕೊಳ್ಳಲು ಬಿಜೆಪಿ ಹಾಗೂ ಬಿಎಸ್ಪಿ ಚಿಂತಿಸಿದ್ದು, ಬಿಜೆಪಿ, ಎಸ್ಪಿ, ಬಿಎಸ್ಪಿ ಪಕ್ಷಗಳು ಚುನಾವಣೆ ವೇಳೆ ಬ್ರಾಹ್ಮಣರ ಪರ ಭಾರಿ ಒಲವು ಪ್ರದರ್ಶಿಸುತ್ತಿವೆ. ಆದರೆ ಇದುವರೆಗೂ ಆರು ಮಂದಿ ಬ್ರಾಹ್ಮಣ ಮುಖ್ಯಮಂತ್ರಿಗಳನ್ನು ಕಾಂಗ್ರೆಸ್ ರಾಜ್ಯಕ್ಕೆ ನೀಡಿದೆ ಎನ್ನುವುದನ್ನು ಮರೆಯಬೇಡಿ" ಎಂದಿದ್ದಾರೆ.