ಕೋಯಿಕ್ಕೋಡ್, ಸೆ. 05 (DaijiworldNews/PY): "ನಿಫಾ ವೈರಸ್ ಸೋಂಕು ಲಕ್ಷಣಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ 12 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ" ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಭಾನುವಾರ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ, ಪರೀಕ್ಷೆಗೆ ಕಳುಹಿಸಿದ ಬಾಲಕ ಮಾದರಿಗಳಲ್ಲಿ ನಿಫಾ ವೈರಸ್ ಇರುವುದನ್ನು ದೃಢಪಡಿಸಿದೆ.
"ಬೆಳಗ್ಗೆ 5 ಗಂಟೆಗೆ ಬಾಲಕ ಸಾವನ್ನಪ್ಪಿದ್ದಾನೆ. ನಿನ್ನೆ ರಾತ್ರಿ ಬಾಲಕನ ಸ್ಥಿತಿ ಗಂಭಿರವಾಗಿತ್ತು. ನಾವು ನಿನ್ನೆ ರಾತ್ರಿಯೇ ವಿವಿಧ ತಂಡಗಳನ್ನು ರಚನೆ ಮಾಡಿದ್ದು, ನಿಫಾ ವೈರಸ್ ಪ್ರಕರಣಗಳ ಪತ್ತೆಹಚ್ಚುವಿಕೆಯನ್ನು ಪ್ರಾರಂಭಿಸಿದ್ದೇವೆ. ಬಾಲಕ ಪ್ರಾಥಮಿಕ ಸಂಪರ್ಕದಲ್ಲಿರುವವರನ್ನು ಪ್ರತ್ಯೇಕಿಸಲು ಕ್ರಮ ಕೈಗೊಳ್ಳಲಾಗಿದೆ" ಎಂದು ಸುದ್ದಿಗಾರರಿಗೆ ಸಚಿವರು ಹೇಳಿದ್ದಾರೆ.
ನಿಫಾ ವೈರಸ್ ಭೀತಿ ಹಿನ್ನೆಲೆ ಕೇಂದ್ರ ತಂಡ ಕೇರಳದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಲು ಭೇಟಿ ನೀಡಲಿದೆ.
ದಕ್ಷಿಣ ಭಾರತದಲ್ಲಿ ಮೇ 19, 2018 ರಂದು ಮೊದಲ ನಿಫಾ ವೈರಸ್ ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ವರದಿಯಾಗಿದೆ. ಜೂನ್ 1, 2018 ರ ವೇಳೆಗೆ 17 ಸಾವು ಹಾಗೂ 18 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು.