ಸಕಲೇಶಪುರ, ಸೆ. 05 (DaijiworldNews/PY): ತ್ರಿಕೋನ ಪ್ರೇಮ ಪ್ರಕರಣವೊಂದರಲ್ಲಿ ಓರ್ವ ಯುವತಿ ವಿಷ ಸೇವಿಸಿ, ಮತ್ತೊಬ್ಬಳು ಯುವಕನಿಗೆ ಕಪಾಳಮೋಕ್ಷ ಮಾಡಿದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.
ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಊರಿನ ಹಿರಿಯರು ಮೂವರನ್ನೂ ಕೂರಿಸಿ ಮಾತುಕತೆ ನಡೆಸಿದ್ದರು. ಈ ವೇಳೆ ಒಬ್ಬ ಯುವತಿ ತನಗೆ ಪ್ರಿಯಕರ ಸಿಗದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ವಿಷ ಸೇವಿಸಿದ್ದಾಳೆ. ನಂತರ ಊರಿನ ಗ್ರಾಮಸ್ಥರು ಯಾರನ್ನು ವಿವಾಹವಾಗಬೇಕು ಎಂದು ತೀರ್ಮಾನಿಸಲು ಯುವಕನಿಗೆ ಟಾಸ್ ಹಾಕುವ ಸಲಹೆ ನೀಡಿದ್ದಾರೆ. ಟಾಸ್ ಹಾಕಲು ದಿನವೂ ನಿಗದಿಯಾಗಿತ್ತು. ಆದರೆ, ಟಾಸ್ ಹಾಕುವ ದಿನದಂದು ತ್ರಿಕೋನ ಪ್ರೇಮ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದ್ದು, ಯುವಕ ಟಾಸ್ ಹಾಕಲು ಒಪ್ಪದೇ, ನನಗಾಗಿ ವಿಷ ಸೇವಿಸಿದ್ದವಳನ್ನೇ ನಾನು ವಿವಾಹವಾಗುತ್ತೇನೆ ಎಂದು ತಿಳಿಸಿದ್ದಾನೆ.
ಇದನ್ನೆಲ್ಲಾ ನೋಡುತ್ತಿದ್ದ ಮತ್ತೋರ್ವ ಯುವತಿ ಕೋಪಗೊಂಡು ಯುವಕನಿಗೆ ಕಪಾಳಮೋಕ್ಷ ಮಾಡಿ, ಅಲ್ಲಿಂದ ಮರಳಿದ್ದಾಳೆ. ವಾರಗಟ್ಟಲೆ ಕಗ್ಗಂಟಾಗಿ ಉಳಿದಿದ್ದ ಪ್ರಕರಣವೂ ಕೊನೆಗೂ ಇತಿಶ್ರೀ ಕಂಡಿದೆ.