ಉತ್ತರ ಪ್ರದೇಶ, ಸೆ. 04 (DaijiworldNews/PY): ಕೊಠಡಿಯೊಂದರಲ್ಲಿ 17 ವರ್ಷದ ಯುವತಿಯನ್ನು ದಿನಪೂರ್ತಿ ಕೂಡಿಹಾಕಿ ಮೂವರು ವ್ಯಕ್ತಿಗಳು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಮಹೋಬಾದಲ್ಲಿ ನಡೆದಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಗುರುವಾರ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಳು. ಶುಕ್ರವಾರ ಆರೋಪಿಗಳು ಯುವತಿಯನ್ನು ಅಲ್ಲಿಂದ ಬೇರೆಡೆಗೆ ಕರೆದೊಯ್ಯುತ್ತಿದ್ದ ಸಂದರ್ಭ ಯುವತಿ ತಪ್ಪಿಸಿಕೊಂಡಿದ್ದಾಳೆ. ಪರಾರಿಯಾಗುತ್ತಿರುವ ಆರೋಪಿಗಳನ್ನು ಹಿಡಿಯಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ವ್ಯಕತಿಯೋರ್ವ ಗುರುವಾರ ಯುವತಿಯನ್ನು ನಿರ್ಜನ ಪ್ರದೇಶದಲ್ಲಿದ್ದ ಕೋಣೆಗೆ ಕರೆದೊಯ್ದಿದ್ದು, ಅಲ್ಲಿ ಆತನ ಸ್ನೇಹಿತರು ಹಾಗೂ ಆತನ ಇಬ್ಬರು ಗೆಳೆಯರು ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹೋಬಾದ ಕೊತ್ವಾಲಿ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಬಲರಾಮ್ ಸಿಂಗ್ ಮಾಹಿತಿ ನೀಡಿದ್ದಾರೆ.
ಅತ್ಯಾಚಾರ ಎಸಗುವ ಸಂದರ್ಭ ವಿಡಿಯೋ ಮಾಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ. ಆಕೆಯ ಮೇಲೆ ಅತ್ಯಾಚಾರ ಎಸಗಿದ ಬಳಿಕ ಆಕೆಯನ್ನು ಕೊಠಡಿಯೊಳಗೆ ಬಿಟ್ಟು ಬೀಗ ಹಾಕಿ ಹೋಗಿದ್ದಾರೆ ಎಂದು ಹೇಳಿದ್ದಾರೆ.
ಮೂವರು ಯುವಕರು ಶುಕ್ರವಾರ ವಾಪಾಸ್ಸಾಗಿದ್ದು, ಈ ಪೈಕಿ ಓರ್ವ ಮೋಟಾರ್ ಸೈಕಲ್ನಲ್ಲಿ ಬೇರೆ ಸ್ಥಳಕ್ಕೆ ಕರೆದೊಯ್ಯುತ್ತಿದ್ದ ಸಂದರ್ಭ ಆಕೆ ಬೈಕ್ನಿಂದ ಜಿಗಿದು ನೆರವಿಗಾಗಿ ಕೂಗಿಕೊಂಡಿದ್ದಾಳೆ.
ಸದ್ಯ, ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರು, ಯುವತಿ ಹಾಗೂ ಆಕೆಯ ಕುಟುಂಬದ ಸದಸ್ಯರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಬಲರಾಮ್ ಸಿಂಗ್ ಹೇಳಿದ್ದಾರೆ.