ಬೆಂಗಳೂರು, ಸೆ. 04 (DaijiworldNews/PY): "ಮಂಗಳೂರು ಹಾಗೂ ಉಡುಪಿಯಲ್ಲಿ ಲಸಿಕಾಕರಣ ಹೆಚ್ಚಿಸಲು ಸೂಚನೆ ನೀಡಲಾಗಿದೆ. ಗಡಿ ಭಾಗದಿಂದ 20 ಕಿ.ಮೀ ವ್ಯಾಪ್ತಿಯ ಎಲ್ಲಾ ಕಡೆಯೂ ಲಸಿಕೆ, ಟೆಸ್ಟಿಂಗ್ ಹೆಚ್ಚಿಸಲು ಸೂಚಿಸಲಾಗಿದೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಶನಿವಾರ ಐದು ಜಿಲ್ಲಾಧಿಕಾರಿಗಳ ಜೊತೆ ಕೊರೊನಾ ಕುರಿತಂತೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಗಡಿ ಜಿಲ್ಲೆಗಳಾದ ದ.ಕ., ಉಡುಪಿ, ಹಾಸನ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಟೆಸ್ಟಿಂಗ್ ಸೇರಿದಂತೆ ಆಸ್ಪತ್ರೆ ದಾಖಲು, ಕೊರೊನಾ ಪ್ರಮಾಣ ಹಾಗೂ ಲಸಿಕೆ ಕುರಿತು ವಿವರ ಪಡೆದುಕೊಂಡಿದ್ದೇನೆ" ಎಂದು ಹೇಳಿದ್ದಾರೆ.
"ಉಡುಪಿಯ ಕೆಲವು ಕಡೆಗಳಲ್ಲಿ ಕ್ರಮ ಕೈಗೊಳ್ಳಬೇಕಿದೆ. ಹಾಸನ ಹಾಗೂ ಚಾಮರಾಜನಗರಗಳಲ್ಲಿ ಕೊರೊನಾ ಪ್ರಕರಣ ಕಡಿಮೆ ಇದೆ. ಲಸಿಕೆ ಹಾಗೂ ಕೊರೊನಾ ನಿರ್ವಹಣೆ ಕುರಿತು ಚರ್ಚೆ ನಡೆಸಿದ್ದು, ಎಲ್ಲಾ ಕಡೆ ಕೊರೊನಾ ಪರೀಕ್ಷೆ ಹೆಚ್ಚಿಸಲು ಸೂಚಿಸಲಾಗಿದೆ" ಎಂದಿದ್ದಾರೆ.
"ಸಾರ್ವಜನಿಕ ಗಣೇಶೋತ್ಸವ ಕುರಿತು ಸಭೆಯಲ್ಲಿ ಚರ್ಚಿಸಿಲ್ಲ. ರಾಜ್ಯದಲ್ಲಿ ಗಣೇಶೋತ್ಸವವನ್ನು ಯಾವ ರೀತಿಯಾಗಿ ಮಾಡಬೇಕು ಎಂದು ತೀರ್ಮಾನಿಸುತ್ತೇವೆ. ಈ ಬಗ್ಗೆ ಗಡಿ ಜಿಲ್ಲೆಗಳನ್ನು ಕೂಡಾ ಪರಿಗಣಿಸಲಾಗುತ್ತೆ" ಎಂದು ಹೇಳಿದ್ದಾರೆ.