ಬೆಂಗಳೂರು, ಸೆ. 04 (DaijiworldNews/PY): ವಿದ್ಯುತ್ ಬಿಲ್ನಲ್ಲಿ ತಿದ್ದುಪಡಿ ಮಾಡಿ ಬೆಸ್ಕಾಂಗೆ ನಷ್ಟ ಉಂಟು ಮಾಡಿದ್ದ ಮೂರು ಸಿಬ್ಬಂದಿಗಳನ್ನು ಅಮಾನತು ಮಾಡಿರುವುದಾಗಿ ಇಂಧನ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಮುಳಬಾಗಿಲು ಉಪವಿಭಾಗದ ಕಿರಿಯ ಸಹಾಯಕ ಮೆಹಬೂಬ್ ಪಾಷ, ಕಿರಿಯ ಸಹಾಕಿಯರಾದ ಗಾಯತ್ರಮ್ಮ ಹಾಗೂ ಸುಜಾತಮ್ಮ ಎನ್ನುವವರು ಅಮಾನತಾದ ಸಿಬ್ಬಂದಿಗಳು.
"ಮೂವರು ಸಿಬ್ಬಂದಿಗಳು ಕೂಡಾ ಬೇರೆ, ಬೇರೆ ಐಪಿ ವಿಳಾಸಗಳಲ್ಲಿ ಗಣಕಯಂತ್ರಗಳಲ್ಲಿ ಐಡಿ ಉಪಯೋಗಿಸಿ ವಂಚನೆ ಎಸಗಿರುವುದು ದೃಢವಾಗಿದೆ. ಇದರೊಂದಿಗೆ 8 ಆರ್ಆರ್ ಸಂಖ್ಯೆಗಳಲ್ಲಿ ಸುಮಾರು 4,44,966 ರೂ.ಗಳಷ್ಟು ಮೊತ್ತ ಕಂಪೆನಿಗೆ ನಷ್ಟವಾಗಿದೆ. ಹಾಗಾಗಿ ಇವರ ಮೇಲೆ ಇಲಾಖಾ ವಿಚಾರಣೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಲು ಆದೇಶ ನೀಡಲಾಗಿದೆ. ಕೋಲಾರ ಪೊಲೀಸ್ ಠಾಣೆಯಲ್ಲಿ ಇವರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ" ಎಂದು ತಿಳಿಸಿದ್ದಾರೆ.
"ಪ್ರತಿ ತಿಂಗಳು ಬಿಲ್ಲು ವಿತರಿಸುವ ಸಂದರ್ಭ ಕೆಲವು ಬಿಲ್ಗಳಲ್ಲಿ ತಿದ್ದುಪಡಿ ಮಾಡುವ ಮೂಲಕ ಬಿಲ್ ಮೊತ್ತವನ್ನು ಕಡಿಮೆ ಮಾಡಿದ್ದಾರೆ. ಈ ಆರೋಪ ಮೇರೆಗೆ ಅವರನ್ನು ಅಮಾನತು ಮಾಡಲಾಗಿದೆ" ಎಂದಿದ್ಧಾರೆ.
"ಇಲಾಖೆಯಲ್ಲಿ ಯಾವುದೇ ಭ್ರಷ್ಟಾಚಾರವನ್ನು ನಾನು ಸಹಿಸುವುದಿಲ್ಲ. ಅಕ್ರಮ ಎಸಗಿ ಇಲಾಖೆಗೆ ನಷ್ಟವುಂಟು ಮಾಡುವ ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ಇರಲಿ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು" ಎಂದು ಎಚ್ಚರಿಕೆ ನೀಡಿದ್ದಾರೆ.