ಉತ್ತರ ಪ್ರದೇಶ, ಸ.04 (DaijiworldNews/HR): 13 ವರ್ಷದ ಹುಡುಗನೊಬ್ಬ 60 ರೂಪಾಯಿ ಸಾಲದ ಕ್ಷುಲ್ಲಕ ಕಾರಣಕ್ಕಾಗಿ ತನ್ನ ಸ್ನೇಹಿತನನ್ನು ಕಲ್ಲಿನಿಂದ ಹೊಡೆದು ಸಾಯಿಸಿರುವ ಘಟನೆ ಉತ್ತರ ಪ್ರದೇಶದ ಹಮೀರ್ಪುರ ಜಿಲ್ಲೆಯಲ್ಲಿ ನಡೆದಿದೆ.
ಸಾಂಧರ್ಭಿಕ ಚಿತ್ರ
ಕೇವಲ 60 ರೂಪಾಯಿಗಳ ವಿಷಯಕ್ಕಾಗಿ ಸ್ನೀಹಿತರಿಬ್ಬರ ನಡುವೆ ನಡೆದ ಜಗಳ ಈ ಕೊಲೆಯಲ್ಲಿ ಅಂತ್ಯಗೊಂಡಿದೆ. ಮೃತನ ದೇಹವನ್ನು ಕಾಡು ಪ್ರಾಣಿಗಳು ಸಿಗಿದು ಹಾಕಿದ್ದು, ಮೃತ ದೇಹದ 11 ಭಾಗಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಕೊಲೆಯು ಸುಮೇರ್ಪುರ ತಾಲೂಕಿನ ಕಾನ್ಶಿ ರಾಮ್ ಕಾಲೋನಿಯಲ್ಲಿ ನಡೆದಿದ್ದು, ಖಚಿತ ಮಾಹಿತಿಯನ್ನು ಪಡೆದ ಪೊಲೀಸರು 13 ವರ್ಷದ ಬಾಲಕನನ್ನು ವಿಚಾರಣೆಗೆ ಒಳ ಪಡಿಸಿದ್ದು, ವಿಚಾರಣೆಯ ಸಮಯದಲ್ಲಿ ಆ ಬಾಲಕ ತಾನು ತನ್ನ ಸ್ನೇಹಿತ ಸುಬ್ಬಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಇನ್ನು ತನಗೆ ಮತ್ತು ಸುಬ್ಬಿಗೆ ಕಳೆದ ನಾಲ್ಕೈದು ತಿಂಗಳಿನಿಂದ ಒಡನಾಟವಿದ್ದು, ತಾನು ಆತನಿಂದ 60 ರೂಪಾಯಿ ಸಾಲ ಪಡೆದಿದ್ದೆ, ಆದರೆ ಅದನ್ನು ಹಿಂದಿರುಗಿಸಲು ಸಾಧ್ಯವಾಗಿರಲಿಲ್ಲ. ಆ ಕಾರಣಕ್ಕಾಗಿ ತಮ್ಮ ನಡುವೆ ಜಗಳ ನಡೆಯಿತು. ನಾನು ಸುಬ್ಬಿಯನ್ನು ಕಾಡಿನ ಕಡೆಗೆ ಕರೆದುಕೊಂಡು ಹೋದಾಗ ಸುಬ್ಬಿ ನನಗೆ ಕೆಟ್ಟದಾಗಿ ಬೈಯುತ್ತಿದ್ದ, ನಾವಿಬ್ಬರು ಹೊಡೆದಾಡಿಕೊಂಡಿದ್ದು, ಅವನು ನನ್ನನ್ನು ಕೊಲ್ಲಲು ಪಕ್ಕದಲ್ಲಿ ಇದ್ದ ಕಲ್ಲನ್ನು ಎತ್ತಿಕೊಂಡ ಆಗ ನಾನು ಅವನನ್ನು ಕೆಳಕ್ಕೆ ಬೀಳಿಸಿದೆ. ಅವನ ಕೈಯಲ್ಲಿದ್ದ ಕಲ್ಲನ್ನು ಕಿತ್ತುಕೊಂಡು, ಅವನ ತಲೆಗೆ ಹೊಡೆದೆ. ಅವನು ಕೆಳಗೆ ಬಿದ್ದಾಗ ಅವನ ತಲೆಯಲ್ಲಿ ರಕ್ತ ಬರಲು ಆರಂಭವಾಯಿತು ಎಂದು ಆರೋಪಿ ಬಾಲಕ ವಿಚಾರಣೆಯ ಸಂದರ್ಭದಲ್ಲಿ ಪೊಲೀಸರಿಗೆ ತಿಳಿಸಿದ್ದಾನೆ ಎಂದು ವರದಿಗಳು ತಿಳಿಸಿವೆ.
ಇನ್ನುಕಲ್ಲಿನಿಂದ ಹೊಡೆಸಿಕೊಂಡ ಬಳಿಕವೂ ಸುಬ್ಬಿ ಉಸಿರಾಡುತ್ತಿದ್ದ, ಆದರೆ ಆರೋಪಿ ಬಾಲಕ ಆತನನ್ನು ಪೊದೆಯೊಂದರ ಒಳಗೆ ಎಳೆದು ಹಾಕಿ, ಆ ಜಾಗದಿಂದ ಪರಾರಿ ಆದ. ಬಳಿಕ ಸುಬ್ಬಿ ಸಾವನ್ನಪ್ಪಿದನು ಎನ್ನಲಾಗಿದೆ.