ಹಾಸನ, ಸೆ 04 (DaijiworldNews/MS): ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಈಗಾಗಲೇ ಜನರ ಓಡಾಟ ನಿಯಂತ್ರಿಸಲು ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ. ಆದರೆ ಈ ನಿಯಮಗಳು ಕೇವಲ ಜನಸಾಮಾನ್ಯರಿಗೆ ಮಾತ್ರವೇ ರಾಜಕೀಯ ಮುಖಂಡರುಗಳಿಗೆ ಇಲ್ಲವೇ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಹೌದು ಬಿಜೆಪಿ ಜಿಲ್ಲಾಧ್ಯಕ್ಷ ಹುಲ್ಲಹಳ್ಳಿ ಸುರೇಶ್ ಹುಟ್ಟು ಹಬ್ಬದಲ್ಲಿ ಕೊವೀಡ್ ನಿಯಮ ಉಲ್ಲಂಘನೆ ಮಾಡಿ ಬೀದಿ ಬೀದಿಯಲ್ಲಿ ಮೆರವಣಿಗೆ ಮಾಡುತ್ತಾ ಹುಟ್ಟು ಹಬ್ಬ ಆಚರಿಸಿದ್ದಾರೆ.
ಹುಟ್ಟು ಹಬ್ಬಕ್ಕಾಗಿ ಮೆರವಣಿಗೆ ಮಾಡಿರುವುದಲ್ಲದೆ, ರಾತ್ರಿ ನೈಟ್ ಕರ್ಫ್ಯೂ ನಡುವೆಯೂ ಅಭಿಮಾನಿಗಳು ಡಿಜೆ ಪಾರ್ಟಿ ಮಾಡಿದ್ದಾರೆ. ಇದರಿಂದ ಟ್ರಾಫಿಕ್ ಜಾಮ್ ಆಗಿ ಸಾರ್ವಜನಿಕರಿಗೂ ತೊಂದರೆ ಉಂಟಾಗಿತ್ತು. ಮಾಸ್ಕ್, ಸ್ಯಾನಿಟೈಜರ್ ಇಲ್ಲದೆ ಬೇಕಾಬಿಟ್ಟಿಯಾಗಿ ಬಿಜೆಪಿ ಕಾರ್ಯಕರ್ತರು ವರ್ತಿಸಿದ್ದಾರೆ. ಆಡಳಿತ ಪಕ್ಷದ ಜವಾಬ್ದಾರಿಯುತ ಅಧ್ಯಕ್ಷರಾಗಿ ಬೇಜವಾಬ್ದಾರಿ ವರ್ತನೆ ತೋರಿರುವುದರಿಂದ ಹುಲ್ಲಹಳ್ಳಿ ಸುರೇಶ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಜನ ಆಕ್ರೋಶ ಹೊರಹಾಕಿದ್ದಾರೆ.
ಇನ್ನು ರಸ್ತೆಯಲ್ಲಿ ನೂರಾರು ಜನ ಸೇರಿದ್ದರೂ ಸ್ಥಳದಲ್ಲಿದ್ದ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲು ಮುಂದಾಗಿಲ್ಲ ಎಂದು ಅಸಮಾಧಾನ ಜನರು ವ್ಯಕ್ತಪಡಿಸಿದ್ದಾರೆ.