ಬೆಂಗಳೂರು, ಸೆ. 04 (DaijiworldNews/PY): "ರಾಜ್ಯದಲ್ಲಿ ಶೇ.40ರಿಂದ ಶೇ.60ಕ್ಕೆ ಏರೋಸ್ಪೇಸ್ ಉತ್ಪಾದನೆಯನ್ನು ಏರಿಸುವುದು ರಾಜ್ಯ ಸರ್ಕಾರದ ಗುರಿಯಾಗಿದೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಅಮೇರಿಕನ್ ಚೇಂಬರ್ ಆಫ್ ಕಾರ್ಮಸ್ ಇನ್ ಇಂಡಿಯಾ ಇವರ 29ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ಬೆಂಗಳೂರಿನಲ್ಲಿ ಇಸ್ರೋ ತನ್ನ ಕೇಂದ್ರ ಕಚೇರಿಯನ್ನು ಹೊಂದಿದೆ. ರಾಜ್ಯದಲ್ಲಿ ಹೆಚ್ಚು ಇಂಜಿನಿಯರಿಂಗ್ ಕಾಲೇಜುಗಳಿವೆ. ಐಐಎಸ್ಸಿ ಸೇರಿದಂತೆ ಐಐಟಿ ಹಾಗೂ ಐಐಎಂ ಮುಂತಾದ ಕಾಲೇಜುಗಳಿವೆ. ರಾಜ್ಯದ ಜನರಲ್ಲಿ ಇವುಗಳು ವೈಜ್ಞಾನಿಕ ಮನೋಭಾವ ಹೆಚ್ಚಿಸಿದೆ" ಎಂದಿದ್ದಾರೆ.
"ಕರ್ನಾಟಕ ರಾಜ್ಯ ಭಾರತದ ನಿರ್ಮಾಣದಲ್ಲಿ ತನ್ನದೇ ಆದ ಕೊಡುಗೆ ನೀಡಿದ್ದು, ಕರ್ನಾಟಕವು ಸಂಶೋಧನೆ ಸೇರಿದಂತೆ ಅಭಿವೃದ್ದಿಯಲ್ಲಿಯೂ ಮುಖ್ಯವಾದ ಪಾತ್ರ ವಹಿಸಿದೆ" ಎಂದು ಹೇಳಿದ್ದಾರೆ.
ಚೆನ್ನೈನಲ್ಲಿರುವ ಅಮೇರಿಕ ಕಾನ್ಸುಲೇಟ್ ಕಚೇರಿಯ ಕಾನ್ಸುಲ್ ಜನರಲ್ ಜ್ಯುಡಿತ್ ರಾವಿನ್, ಆಮ್ ಚಾಮ್ ಉತ್ಪಾದನಾ ಸಮಿತಿ ಅಧ್ಯಕ್ಷ ಸಂಜಯ್ ಕೌಲ್, ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆ ಹಾಗೂ ಐ.ಟಿ ಬಿ.ಟಿ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ಮುಖ್ಯಮಂತ್ರಿಗಳ ಪ್ರಧಾನಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಉಪಸ್ಥಿತರಿದ್ದರು.