ನವದೆಹಲಿ, ಸೆ 04 (DaijiworldNews/MS): ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ತಿಂಗಳಾಂತ್ಯದಲ್ಲಿ ಅಮೆರಿಕಕ್ಕೆ ಪ್ರವಾಸ ನಡೆಸಲಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಪ್ರಧಾನಿ ಭೇಟಿ ನೀಡಿದರೆ ಅಧ್ಯಕ್ಷ ಜೋ ಬಿಡೆನ್ ಈ ವರ್ಷದ ಆರಂಭದಲ್ಲಿ ಅಧಿಕಾರ ವಹಿಸಿಕೊಂಡ ನಂತರ ಅಮೆರಿಕಕ್ಕೆ ಮೊದಲ ಭೇಟಿ ಇದಾಗಲಿದೆ.
ಭೇಟಿಯ ದಿನಾಂಕಗಳನ್ನು ಅಧಿಕೃತವಾಗಿ ದೃಡಪಡಿಸದಿದ್ದರೂ ಪ್ರಧಾನಿ ಮೋದಿಯವರು 21-27 ಸೆಪ್ಟೆಂಬರ್ ನಡುವೆ ಪ್ರಯಾಣಿಸುವ ನಿರೀಕ್ಷೆಯಿದೆ. ಪ್ರವಾಸದ ವೇಳೆ ಮೋದಿ ವಾಷಿಂಗ್ಟನ್ ಮತ್ತು ನ್ಯೂಯಾರ್ಕ್ ಗೆ ಭೇಟಿ ನೀಡುವ ನಿರೀಕ್ಷೆಯಿದೆ.
ಇಲ್ಲಿಯವರೆಗೆ ಒಟ್ಟು ಮೂರು ಬಾರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಇಬ್ಬರೂ ನಾಯಕರು ಮುಖಾಮುಖಿಯಾಗಿದ್ದಾರೆ. ಜೋ ಬಿಡೆನ್ ಅಧ್ಯಕ್ಷರಾದ ಮೇಲೆ ನೇರವಾಗಿ ಈವರೆಗೆ ಭೇಟಿ ಮಾಡಲು ಸಾಧ್ಯವಾಗಿಲ್ಲ. ಮಾರ್ಚ್ನಲ್ಲಿ ಕ್ವಾಡ್ ಶೃಂಗಸಭೆ, ಏಪ್ರಿಲ್ನಲ್ಲಿ ಹವಾಮಾನ ಬದಲಾವಣೆಯ ಶೃಂಗಸಭೆ ಮತ್ತು ಈ ವರ್ಷದ ಜೂನ್ನಲ್ಲಿ ಜಿ -7 ಶೃಂಗಸಭೆಯಲ್ಲಿ ಇಬ್ಬರೂ ನಾಯಕರು ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖಾಮುಖಿಯಾಗಿದ್ದರು. ಸೆಪ್ಟೆಂಬರ್ 25 ರಂದು ಮೋದಿ ಯುಎನ್ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡುವ ನಿರೀಕ್ಷೆಯಿದೆ
2019 ಸೆಪ್ಟೆಂಬರ್ನಲ್ಲಿ ಪ್ರಧಾನಿ ಮೋದಿ ಕೊನೆಯ ಬಾರಿಗೆ ಯುಎಸ್ಗೆ ಭೇಟಿ ನೀಡಿದ್ದರು. ಅಫ್ಘಾನಿಸ್ತಾನದಲ್ಲಿ ಹೊಸ ತಾಲಿಬಾನ್ ಪ್ರಾಬಲ್ಯದ ಸರ್ಕಾರ ರಚನೆಗೆ ಕಸರತ್ತುಗಳು ಮಧ್ಯೆ ಮೋದಿ ಅಮೆರಿಕ ಭೇಟಿ ನೀಡುತ್ತಿರುವುದು ಗಮನ ಸೆಳೆದಿದೆ.