ಕೋಲ್ಕತ್ತಾ, ಸೆ 04 (DaijiworldNews/MS): ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ ವೇಳೆ ದುರ್ಗಾದೇವಿಯ ಜೊತೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪ್ರತಿಮೆಯನ್ನು ಪೆಂಡಾಲ್ನಲ್ಲಿ ಸ್ಥಾಪಿಸಲು ಸಂಘಟಕರು ನಿರ್ಧರಿಸಿರುವುದು ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದೆ.
ಮಣ್ಣಿನ ಮೂರ್ತಿಯ ಖ್ಯಾತ ಕಲಾವಿದ ಮಿಂಟು ಪೌಲ್ ತನ್ನ ಕುಮಾರ್ತುಲಿ ಸ್ಟುಡಿಯೋದಲ್ಲಿ ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರ ಫೈಬರ್ ಗ್ಲಾಸ್ ಪ್ರತಿಮೆಯನ್ನು ಅವರ ಟ್ರೇಡ್ ಮಾರ್ಕ್ ಬಿಳಿ ಬಣ್ಣದ ಟಿಂಟ್ ಸೀರೆ ಮತ್ತು ಫ್ಲಿಪ್-ಫ್ಲಾಪ್ ಚಪ್ಪಲಿಗಳನ್ನು ಧರಿಸಿರುವಂತೆ ತಯಾರಿಸುತ್ತಿದ್ದಾರೆ.
ನಾವು ಎಂದಿನಂತೆ ದುರ್ಗಾದೇವಿಯ ಮಣ್ಣಿನ ಮೂರ್ತಿಯನ್ನು ಪೂಜಿಸುತ್ತೇವೆ. ಈ ವರ್ಷದ ನಮ್ಮ ವಿಷಯವೆಂದರೆ ತುಮಿ ಭೋರ್ಷಾ( ನೀನೆ ಭರವಸೆ), ಹಾಗಾಗಿ ನಾವು ಮಮತಾ ಬ್ಯಾನರ್ಜಿಯ ಪ್ರತಿಮೆಯನ್ನು ರಚಿಸುತ್ತಿದ್ದೇವೆ. ದೇವಿಯ ವಿಗ್ರಹಗಳ ಜೊತೆ ನಾವು ಮಮತಾ ಬ್ಯಾನರ್ಜಿ ಪ್ರತಿಮೆ ಇರಿಸಿದರೂ ಅದನ್ನು ಪೂಜಿಸುವುದಿಲ್ಲ. ಮಮತಾ ಬ್ಯಾನರ್ಜಿ ಹತ್ತು ಕೈಗಳನ್ನು ಹೊಂದಿದ್ದು, ಆಯುಧಗಳನ್ನು ಹಿಡಿದಿಟ್ಟುಕೊಳ್ಳುವ ಬದಲು, ಕನ್ಯಾಶ್ರೀ, ಸ್ವಸ್ಥ ಸತಿ, ರೂಪಶ್ರೀ, ಸಾಬುಜಸತಿ ಮತ್ತು ಲಕ್ಷ್ಮೀರ್ ಭಂಡಾರ್ ಸೇರಿದಂತೆ ಇತರ ಯೋಜನೆಗಳನ್ನು ರಾಜ್ಯ ಸರ್ಕಾರದ ಯೋಜನೆಗಳನ್ನು ಚಿತ್ರಿಸುತ್ತದೆ ಎಂದು ಸಂಘಟಕರು ತಿಳಿಸುತ್ತಾರೆ.
ವಿರೋಧ ಪಕ್ಷ ಬಿಜೆಪಿ ಈ ಬಗ್ಗೆ ಕೆಂಡಕಾರಿದ್ದು, ‘ಇದು ವಾಕರಿಕೆ ತರುವಂತದ್ದು ಮತ್ತು ರಾಜ್ಯದ ಹಿಂದೂಗಳ ಸಂವೇದನೆಯನ್ನು ನೋಯಿಸುವಂತಹದ್ದು’ ಎಂದು ಕಿಡಿಕಾರಿದೆ. ಇದು ದೇವಿಗೆ ಮಾಡಿದ ಅವಮಾನ ಮತ್ತು ಹಿಂದೂಗಳ ಭಾವನೆಗಳನ್ನು ನೋಯಿಸುವಂತದ್ದು, ಬಂಗಾಳದಲ್ಲಿ ಚುನಾವಣೆಯ ನಂತರದ ಭೀಕರ ಹಿಂಸಾಚಾರದ ನಂತರ ಅಮಾಯಕ ಬಂಗಾಳಿಗಳ ರಕ್ತವನ್ನು ಹೊಂದಿರುವ ಮಮತಾ ಬ್ಯಾನರ್ಜಿಯ ಈ ದೈವೀಕರಣವು ವಾಕರಿಕೆಯನ್ನುಂಟುಮಾಡುತ್ತದೆ. ಇದು ದುರ್ಗಾ ದೇವಿಗೆ ಮಾಡಿದ ಅವಮಾನ. ಮಮತಾ ಬ್ಯಾನರ್ಜಿ ಇದನ್ನು ನಿಲ್ಲಿಸಬೇಕು. ಅವರು ಬಂಗಾಳದ ಹಿಂದೂಗಳ ಸಂವೇದನೆಯನ್ನು ನೋಯಿಸುತ್ತಿದ್ದಾರೆ "
ಬಿಜೆಪಿ ಶಾಸಕ ಸುವೇಂಡು ಅಧಿಕಾರಿ ವಿಗ್ರಹದ ವಿಚಾರವಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿ "ನಿಮ್ಮನ್ನು ಮೆಚ್ಚಿಸಲು ಮತ್ತು ನಿಮ್ಮ ಮೌನ ಒಪ್ಪಿಗೆಯನ್ನು ಸೂಚಿಸಲು ಯಾರಾದರೂ ನಿಮ್ಮನ್ನು ದೇವರ ಸ್ಥಾನಮಾನಕ್ಕೆ ಏರಿಸಲು ಪ್ರಯತ್ನಿಸಿದರೆ, ನಿಮ್ಮ ಅಹಂಕಾರವು ಆತ್ಮಸಾಕ್ಷಿಯು ಹಿಡಿದಿಡಲಾಗದ ಹಂತಕ್ಕೆ ತಲುಪಿದೆ ಎಂದರ್ಥ ಎಂದು ಕಿಡಿಕಾರಿದ್ದಾರೆ.