ಚಿಕ್ಕೋಡಿ , ಸೆ 04(DaijiworldNews/MS): ವಿಷಜಂತುವೊಂದು ಕಡಿದು ತಂದೆ ಹಾಗೂ ಮಗ ಮೃತಪಟ್ಟ ಘಟನೆ ಅಥಣಿ ತಾಲೂಕಿನ ಬಾಡಗಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಸ್ಥಳೀಯ ನಿವಾಸಿ ಮುತ್ತಪ್ಪ ಬಾಳಪ್ಪ ಕುಂಬಾರ (40) ಹಾಗೂ ಅವರ ಪುತ್ರ ಮಲ್ಲಿಕಾರ್ಜುನ್ ಮುತ್ತಪ್ಪ ಕುಂಬಾರ (14) ಎಂದು ಗುರುತಿಸಲಾಗಿದೆ.
ಕಳೆದ ಆಗಸ್ಟ್ 29ರಂದು ನಸುಕಿನ ಜಾವ ಹೊಲಕ್ಕೆ ನೀರು ಹಾಯಿಸಲು ಹೋಗಿದ್ದಾಗ ಇಬ್ಬರಿಗೂ ಹಾವು ಕಚ್ಚಿರುವ ಬಗ್ಗೆ ಶಂಕಿಸಲಾಗಿದೆ. ಕತ್ತಲು ಇರೋದ್ರಿಂದ ಇನ್ನೇನೋ ಕಚ್ಚಿರಬಹುದು ಎಂದು ಭಾವಿಸಿದ್ದಾರೆ. ಆದರೆ ಸ್ವಲ್ಪಹೊತ್ತಿಗೆ ಇಬ್ಬರೂ ತೀವ್ರ ಅಸ್ವಸ್ಥಗೊಂಡಿದ್ದಾರೆ. ಆ ಬಳಿಕ ಇಬ್ಬರನ್ನು ಅಥಣಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆದರೆ ಆಗಸ್ಟ್ 31 ರಂದು ಪುತ್ರ ಮಲ್ಲಿಕಾರ್ಜುನ್ ಮೃತಪಟ್ಟರೆ , ಸೆಪ್ಟೆಂಬರ್ 2 ರಂದು ಮುತ್ತಪ್ಪ ಬಾಳಪ್ಪ ಕುಂಬಾರ ಸಾವನ್ನಪ್ಪಿದ್ದಾರೆ. ಇಬ್ಬರನ್ನೂ ಕಳೆದುಕೊಂಡ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.
ಈ ಕುರಿತು ಐಗಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.