ಬೆಂಗಳೂರು, ಸೆ. 03 (DaijiworldNews/PY): "ಕೊರೊನಾ ಹಾವಳಿ ಕಡಿಮೆ ಆಗಿಲ್ಲ. ಈ ಹಿನ್ನೆಲೆ ಸರಳ ದಸರಾ ಆಚರಣೆ ಮಾಡೋಣ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, "ಕಳೆದ ವರ್ಷದಂತೆ ಈ ವರ್ಷವೂ ಸರಳ ದಸರಾ ಆಚರಣೆ ಮಾಡಲಾಗುವುದು. ಈ ಬಾರಿಯೂ ಕೂಡಾ ಸರಳ ದಸರಾ ಆಚರಣೆಗೆ ಒಲವು ತೋರಿದ್ದು, ಜನಪ್ರತಿನಿಧಿಗಳಿಂದಲೂ ಸರಳ ದಸರಾ ಆಚರಣೆ ನಡೆಸಲು ಒಲವು ತೋರಿದ್ದಾರೆ" ಎಂದಿದ್ದಾರೆ.
"ಕೊರೊನಾ ಹಾವಳಿ ಇನ್ನೂ ಕೂಡಾ ಕಡಿಮೆ ಆಗಿಲ್ಲ. ಈ ಕಾರಣದಿಂದ ಸರಳ ದಸರಾ ಆಚರಿಸೋಣ. ದಸರಾ ಮಹೋತ್ಸಕ್ಕೆ ಆರು ಕೋಟಿ ಬಿಡುಗಡೆಗೆ ನಿರ್ಧರಿಸಲಾಗಿದೆ" ಎಂದು ತಿಳಿಸಿದ್ದಾರೆ.
ಕಳೆದ ಬಾರಿ ದಸರಾ ಉದ್ಘಾಟನೆಗೆ 150 ಮಂದಿಗೆ ಅವಕಾಶ ನೀಡಲಾಗಿತ್ತು. ಜಂಬೂ ಸವಾರಿಗೆ 200 ಮಂದಿಗೆ ಅವಕಾಶ ನೀಡಲಾಗಿತ್ತು. ಆದರೆ, ಈ ಬಾರಿ ಎರಡೂ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹಿಂದಿನ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚು ಜನರಿಗೆ ಅವಕಾಶ ನೀಡಬೇಕೆಂದು ಒತ್ತಡ ಬಂದಿದೆ. ಇನ್ನೂ ಒಂದು ಹಂತದ ಸಭೆ ನಡೆಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.