ಬೆಂಗಳೂರು, ಸ.03 (DaijiworldNews/HR): ಟ್ರಾಫಿಕ್ ನಿಯಮ ಉಲ್ಲಂಘನೆ ನೆಪದಲ್ಲಿ ವಾಹನ ಟೋಯಿಂಗ್ ಸಿಬ್ಬಂದಿಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ಕಿರುಕುಳದ ಬಗ್ಗೆ ಆಪಾದನೆಗಳು ಕೇಳಿಬರುತ್ತಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಹಾಗೂ ಹೆಚ್ಚುವರಿ ಆಯುಕ್ತ (ಸಂಚಾರ) ರವಿಕಾಂತೇಗೌಡ ಅವರ ಜೊತೆ ಸಭೆ ನಡೆಸಿ ಇನ್ನು ಮುಂದೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.
ಈ ಕುರಿತು ಮಾತನದಿದ ಅವರು, "ಯಾವುದೇ ವಾಹವನವನ್ನು ಟೋಯಿಂಗ್ ಮಾಡುವ ಮೊದಲು ಸ್ಥಳದಲ್ಲಿದ್ದ ಟ್ರಾಫಿಕ್ ಪೊಲೀಸರು ವಾಹನ ಮಾಲೀಕರ ಗಮನ ಸೆಳೆಯಲು ಸೈರನ್ ಅಥವಾ ಹಾರ್ನ್ ಮಾಡಬೇಕು. ವಾಹನ ಟೋಯಿಂಗ್ ಮಾಡಬೇಕಾದ ಸಂಧರ್ಭದಲ್ಲಿ ತೆಗೆದುಕೊಳ್ಳಬೇಕಾದ ಎಲ್ಲಾ ನಿಯಾಮಾವಳಿಗಳನ್ನು ಚಾಚೂ ತಪ್ಪದೆ ಅನುಸರಿಸಬೇಕು" ಎಂದು ಸೂಚಿಸಿದ್ದಾರೆ.
ಟ್ರಾಫಿಕ್ ಪೊಲೀಸರು ಇನ್ನು ಮುಂದೆ ಯಾವುದೇ ಸಂಧರ್ಭದಲ್ಲಿ ವಾಹನವನ್ನು ಹೊತ್ತೊಯ್ಯುವ ಸಮಯದಲ್ಲಿ ವಾಹನದ ಮಾಲೀಕರು ಸ್ಥಳದಲ್ಲಿದ್ದರೆ ಕೇವಲ 'ನೋ ಪಾರ್ಕಿಂಗ್' ಶುಲ್ಕದ ಹಣವನ್ನು ಮಾತ್ರ ಪಡೆದುಕೊಳ್ಳಬೇಕು ಹಾಗೂ ವಾಹನವನ್ನು ಅಲ್ಲಿಯೇ ಅವರಿಗೆ ಬಿಟ್ಟು ಕೊಡಬೇಕು ಮತ್ತು ಟೋಯಿಂಗ್ ಮಾಡಬಾರದು ಎಂದು ತಿಳಿಸಿದ್ದಾರೆ.