ಚಿಕ್ಕಮಗಳೂರು, ಸೆ 3 (DaijiworldNews/MS): ದಲಿತ ಯುವಕನಿಗೆ ಮೂತ್ರ ನೆಕ್ಕಿಸಿದ ಆರೋಪ ಪ್ರಕರಣದಲ್ಲಿ ಬಂಧಿತ ಆರೋಪಿ ಹಾಗೂ ಸಬ್ ಇನ್ಸ್ ಪೆಕ್ಟರ್ ಅರ್ಜುನ್ ಅವರನ್ನು ಸಿಐಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಆದೇಶ ನೀಡಿದೆ.
ಸಿಐಡಿ ಚಿಕ್ಕಮಗಳೂರಿನ ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಕೋರ್ಟ್ ಈ ಆದೇಶ ಹೊರಡಿಸಿತು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಠಾಣೆಯ ಸಬ್ ಇನ್ಸ್ ಪೆಕ್ಟರ್ ಅರ್ಜುನ್ ವಿಚಾರಣೆಗೆಂದು ಕರೆತಂದು ಮೇ. 10ರಂದು ಯುವಕನಿಗೆ ಮೂತ್ರ ಕುಡಿಸಿ ನೆಲದ ಮೇಲೆ ಬಿದ್ದ ಮೂತ್ರ ನೆಕ್ಕಿಸಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ. ಪ್ರಕರಣ ಸಂಬಂಧ ದಲಿತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಸೆ. 1ರಂದು ಬೆಂಗಳೂರಿನಲ್ಲಿ ಪಿ.ಎಸ್.ಐ. ಅರ್ಜುನ್ ನನ್ನ ಬಂಧಿಸಿದ ಸಿ.ಐ.ಡಿ. ಪೊಲೀಸರು ಚಿಕ್ಕಮಗಳೂರು ಕೋರ್ಟ್ಗೆ ಹಾಜರುಪಡಿಸಿದರು. ಈ ವೇಳೆ ನ್ಯಾಯಾಧೀಶೆ ಪುಷ್ಪಾಂಜಲಿ ಅವರು ಆರೋಪಿ ಅರ್ಜುನ್ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ್ದಾರೆ. ಗೋಣಿಬೀಡು ಠಾಣೆಯಲ್ಲಿ ಪಿ.ಎಸ್.ಐ. ಆಗಿದ್ದ ಅರ್ಜುನ್ ಮೇ. 10ರಂದು ಮಹಿಳೆಗೆ ಕರೆ ಮಾಡಿದ ವಿಚಾರ ಸಂಬಂಧ ಪುನೀತ್ ಯುವಕನನ್ನ ವಿಚಾರಣೆಗೆ ಕರೆತಂದಿದ್ದರು. ಈ ವೇಳೆ ನನಗೆ ಬಾಯಾರಿಕೆ ಎಂದು ನೀರು ಕೇಳಿದಾಗ ಮತ್ತೊಬ್ಬ ಆರೋಪಿಯ ಮೂತ್ರ ನೆಕ್ಕಿಸಿದ್ದರು ಎಂದು ಪುನೀತ್ ಆರೋಪಿಸಿದ್ದರು.