ಬೆಂಗಳೂರು, ಸೆ. 03 (DaijiworldNews/PY): "ಹಣ ಕೊಡುವ ಹಾಗೂ ಹಣ ಪಡೆಯುವ ಸಂಸ್ಕೃತಿ ಬಿಜೆಪಿಯಲ್ಲಿ ಇಲ್ಲ. ಸೂಟ್ ಕೇಸ್ ಸಂಸ್ಕೃತಿ ಇರುವುದು ಜೆಡಿಎಸ್ ಪಕ್ಷದಲ್ಲಿ" ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಬಿಜೆಪಿ ರಾಜ್ಯ ಉಸ್ತುವಾರಿ ಸಚಿವ ಅರುಣ್ ಸಿಂಗ್ ಅವರು ಸೂಟ್ ಕೇಸ್ ಪಡೆಯಲು ಆಗಾಗ ರಾಜ್ಯಕ್ಕೆ ಬರುತ್ತಾರೆ ಎನ್ನುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ತಿರುಗೇಟು ನೀಡಿದ ಅವರು, "ಅರುಣ್ ಸಿಂಗ್ ಅವರ ವಿರುದ್ದ ಹಣ ಪಡೆದ ಆರೋಪ ಮಾಡಿ. ಹೆಚ್ಡಿಕೆ ಅವರು ಹೇಳಿಕೆ ನೀಡಿರುವುದು ಖಂಡನೀಯ. ಅವರು ಪಕ್ಷ ಸಂಘಟನೆಗಾಗಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ" ಎಂದಿದ್ದಾರೆ.
"ಮುಂದಿನ ವಿಧಾನಸಭಾ ಚುನಾವಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ನಡೆಸಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ನನ್ನ ಬೆಂಬಲ ಇದೆ" ಎಂದು ತಿಳಿಸಿದ್ದಾರೆ.
"ಸಿಎಂ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುವುದು ಸಹಜವಾದ ಪ್ರಕ್ರಿಯೆ. ಈ ಬಗ್ಗೆ ಅಮಿತ್ ಶಾ ಅವರ ಹೇಳಿಕೆ ಸೂಕ್ತವಾಗಿದೆ" ಎಂದಿದ್ದಾರೆ.
"ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ನಮ್ಮ ನಾಯಕ. ಪಕ್ಷದ ನಾಯಕರೊಂದಿಗೆ ಅವರು ಚರ್ಚೆ ನಡೆಸಿ, ರಾಜ್ಯ ಪ್ರವಾಸ ಕೈಗೊಳ್ಳುವ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ" ಎಂದು ತಿಳಿಸಿದ್ದಾರೆ.