ಪಟ್ನಾ, ಸೆ 3 (DaijiworldNews/MS): ಜೆಡಿಯೂ ಪಕ್ಷದ ನಾಯಕ ಮತ್ತು ಬಿಹಾರದ ಭಾಗಲ್ಪುರ್ ಜಿಲ್ಲೆಯ ಗೋಪಾಲಪುರ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕ ಗೋಪಾಲ್ ಮಂಡಲ್ ಗುರುವಾರ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಕೇವಲ ಒಳ ಉಡುಪು ಧರಿಸಿ ತಿರುಗಾಡುತ್ತಿರುವುದನ್ನು ಕಂಡು ಸಹ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ವರದಿಯಾಗಿದೆ.
ಗೋಪಾಲ್ ಮಂಡಲ್ ಅವರು ತೇಜಸ್ ರಾಜಧಾನಿ ಎಕ್ಸ್ಪ್ರೆಸ್ನಲ್ಲಿ ಪಟ್ನಾದಿಂದ ನವದೆಹಲಿಗೆ ಪ್ರಯಾಣಿಸುತ್ತಿದ್ದಾಗ ರೈಲಿನ್ನಲ್ಲಿ ಕೇವಲ ಕನಿಷ್ಠ ಎನ್ನುವಷ್ಟು ಬಟ್ಟೆಗಳನ್ನು ಮಾತ್ರ ಧರಿಸಿದ್ದರು.
ಸಹ-ಪ್ರಯಾಣಿಕರು ಇವರ ವರ್ತನೆಗೆ ಆಕ್ಷೇಪಿಸಿದಾಗ, ಮಂಡಲ್ ಗಲಾಟೆ ಮಾಡಿ ನಿಂದಿಸಿ ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಕೊನೆಗೆ ಗಲಾಟೆ ತಡೆಯಲು ರೈಲ್ವೆ ಪೊಲೀಸ್ ಪಡೆ (ಆರ್ಪಿಎಫ್) ಮತ್ತು ಟಿಕೆಟ್ ಪರೀಕ್ಷಕರು ಮಧ್ಯ ಪ್ರವೇಶಿಸಬೇಕಾಯಿತು ಎರಡೂ ಕಡೆಯವರ ಮನವೊಲಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಮಂಡಲ್ , " ಸಹ ಪ್ರಯಾಣಿಕರು "ಅತಿಯಾಗಿ ಪ್ರತಿಕ್ರಿಯಿಸಿದ್ದಾರೆ" ನಾನು ಅತಿಸಾರದಿಂದ ಬಳಲುತ್ತಿದ್ದೆ. ಪ್ರಯಾಣ ಆರಂಭವಾದ ತಕ್ಷಣ ನನಗೆ ವಾಶ್ರೂಮ್ಗೆ ಹೋಗಬೇಕು ಎಂದು ಅನಿಸಿತು. ಹಾಗಾಗಿ ನಾನು ನನ್ನ ಕುರ್ತಾ ಮತ್ತು ಪೈಜಾಮಾವನ್ನು ಕಿತ್ತುಹಾಕಿ ವಾಶ್ ರೂಂ ಕಡೆ ಹೋದೆ ಎಂದು ಹೇಳಿದ್ದಾರೆ.
ಇವರ ವರ್ತನೆಯಿಂದ ಮಹಿಳಾ ಪ್ರಯಾಣಿಕರಿಗೆ ಮುಜುಗರವಾಗಿದೆ ಎಂಬ ಆರೋಪಕ್ಕೆ ಸಮರ್ಥನೆ ನೀಡಿರುವ ಮಂಡಲ್ ತಾನೀದ್ದ ಕೋಚ್ ನಲ್ಲಿ ಮಹಿಳಾ ಪ್ರಯಾಣಿಕರಿರಲಿಲ್ಲ ಎಂದಿದ್ದಾರೆ.