ಹುಬ್ಬಳ್ಳಿ, ಸೆ. 03 (DaijiworldNews/PY): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಬೆಲೆ ಹೆಚ್ಚಳ ಬಗ್ಗೆ ಚರ್ಚೆ ನಡೆಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ದರ ಕಚ್ಚಾ ತೈಲ ಮೇಲೆ ಮಾತ್ರವೇ ತೀರ್ಮಾನವಾಗುವುದಿಲ್ಲ. ಕಂಪನಿಯ ಹಣಕಾಸು ವಿಚಾರದ ಮೇಲೆ ಕಚ್ಚಾ ತೈಲ ಸಂಸ್ಕರಣೆ ದರ ನಿರ್ಧಾರವಾಗುತ್ತದೆ. ಇತರ ಖರ್ಚು ಹೆಚ್ಚಾದ ಕಾಎಣ ದರ ಹೆಚ್ಚಳವಾಗಿರಬೇಕು" ಎಂದಿದ್ದಾರೆ.
"ಕಾಂಗ್ರೆಸ್ ನಾಯಕರ ಆಡಳಿತಾವಧಿಯಲ್ಲಿ ದರ ಹೆಚ್ಚಳವಾಗಿಲ್ಲವೇ?. ಅವರು ಏನೆಲ್ಲಾ ಬಾಂಡ್ ಮಾಡಿಕೊಟ್ಟಿದ್ದಾರೆ ಎಂದು ನಮಗೆ ಕೂಡಾ ತಿಳಿದಿದೆ. ಈ ಎಲ್ಲಾ ಬೆಲೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಏರಿಕೆಯಾಗಿರುವ ಕಾರಣ ಬೆಲೆ ಹೆಚ್ಚಳವಾಗಿರಬಹುದು. ಕಚ್ಚಾ ತೈಲದ ಬೆಲೆ ಕಡಿಮೆಯಾಗಿದ್ದರೂ ಕೂಡಾ ಬೆಲೆ ಹೆಚ್ಚಳವಾಗಿದೆ ಎನ್ನುವುದು ಸೂಕ್ತವಲ್ಲ" ಎಂದು ತಿಳಿಸಿದ್ದಾರೆ.
"ಕೇರಳದಲ್ಲಿ ಕೊರೊನಾ ಸಂಖ್ಯೆ ಏರಿಕೆಯಾಗುತ್ತಿರುವ ಕಾರಣ ಗಡಿಭಾಗದಲ್ಲಿರುವ ಗ್ರಾಮಗಳಲ್ಲಿ ವಿಶೇಷ ಲಸಿಕಾ ಅಭಿಯಾನ ಕೈಗೊಳ್ಳಲಾಗಿದೆ. ಅಲ್ಲಿನ ಜನರಿಗೆ ಲಸಿಕೆ ಹಾಗೂ ಪರೀಕ್ಷೆ ಮಾಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಕೇರಳದಿಂದ ಆಗಮಿಸುತ್ತಿರುವವರು ನಕಲಿ ಕೊರೊನಾ ವರದಿ ತರುತ್ತಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಆ ವರದಿಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸಲಾಗುತ್ತಿದೆ" ಎಂದು ಹೇಳಿದ್ದಾರೆ.