ಶಿವಮೊಗ್ಗ, ಸೆ. 03 (DaijiworldNews/PY): ಮುಂದಿನ ವಿಧಾನಸಭಾ ಚುನಾವಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ನಡೆಸಲಾಗುವುದು ಎಂಬ ಕೇಂದ್ರ ಸಚಿವ ಅಮಿತ್ ಶಾ ಅವರ ಹೇಳಿಕೆ ಬಿಜೆಪಿ ನಾಯಕರಲ್ಲೇ ಭಿನ್ನಸ್ವರ ಎದ್ದಿದ್ದು, "ಅಮಿತ್ ಶಾ ಅವರು ಯಾವ ರೀತಿಯಾಗಿ ಹೇಳಿದ್ದಾರೆ ತಿಳಿದಿಲ್ಲ. ನಮಗೆಲ್ಲರಿಗೂ ಸಾಮೂಹಿಕ ನಾಯಕತ್ವದ ಬಗ್ಗೆ ಖಂಡಿತವಾಗಿ ಒಲವಿದೆ. ಈ ಬಗ್ಗೆ ಎಲ್ಲರೂ ಕೂತು ತೀರ್ಮಾನ ಕೈಗೊಳ್ಳಲಿದ್ದೇವೆ" ಎಂದು ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಾಮೂಹಿಕ ನಾಯಕತ್ವದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಪಾತ್ರವೂ ಇರಲಿದೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸಂಘಟನೆ ಕಟ್ಟುತ್ತಿದ್ದಾರೆ. ಎಲ್ಲರೂ ಜೊತೆಯಾಗಿ ಕೆಲಸ ಮಾಡುತ್ತಿದ್ದೇವೆ. ಏನೇ ಆದರೂ ಸಹ ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ ನಡೆಯುತ್ತದೆ" ಎಂದಿದ್ದಾರೆ.
"ಕಲಬುರ್ಗಿ, ಹುಬ್ಬಳಿ-ಧಾರವಾಡ, ಬೆಳಗಾವಿಯಲ್ಲಿ ಚುನಾವಣೆ ನಡೆಯುತ್ತಿದ್ದು, ನಾನು ಆ ಭಾಗಕ್ಕೆ ಹೋಗಿ ಬಂದೆ. ಅಲ್ಲಿನ ಜನರು ಬಿಜೆಪಿ ಜೊತೆಗಿದ್ದಾರೆ. ಕಾರ್ಯಕರ್ತರು ಕೂಡಾ ಉತ್ಸಾಹದಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಬಿಜೆಪಿಯು ಮೂರು ಮಹಾನಗರ ಪಾಲಿಕೆಯಲ್ಲಿ ಪೂರ್ಣ ಬಹುಮತ ಪಡೆಯಲಿದೆ" ಎಂದು ಹೇಳಿದ್ದಾರೆ.