ಕೊಲ್ಲಂ, ಸ.03 (DaijiworldNews/HR): ಸಾವಯವ ಕೃಷಿಯ ಕನಸನ್ನು ಹೊತ್ತಿರುವ ಕೇರಳದ ಪಟ್ಟಣಂತಿಟ್ಟ ಜಿಲ್ಲೆಯ ಪಂಡಲಂನ ಜಯಲಕ್ಷ್ಮಿ ಎನ್ನುವ 10ನೇ ತರಗತಿಯ ಬಾಲಕಿ ಕೊಟ್ಟ ಸೀಬೆ ಗಿಡ ಪ್ರಧಾನಿ ನರೇಂದ್ರ ಮೋದಿ ನಿವಾಸದ ಅಂಗಳದ ಉದ್ಯಾನವನದಲ್ಲಿ ಹೂ ಬಿಡಲಿದೆ.
ಜಯಲಕ್ಷ್ಮಿ ಬೆಳೆಸಿದ ಗಿಡವನ್ನು ಮಲಯಾಳಂ ಚಿತ್ರನಟ, ರಾಜಕಾರಣಿ ಸುರೇಶ್ ಗೋಪಿಯವರಿಗೆ ಉಡುಗೊರೆಯಾಗಿ ನೀಡಿದ್ದು, ಇದನ್ನು ಸುರೇಶ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಿದ್ದಾರೆ.
ಇನ್ನು ಜಯಲಕ್ಷ್ಮಿ ತನ್ನ ಮನೆಯ ಅಂಗಳದಲ್ಲಿ ಸಾವಯವ ಉದ್ಯಾನವನ ನಿರ್ಮಿಸಿದ್ದು, ಇದಕ್ಕೆ ರಾಜ್ಯ ಸರ್ಕಾರದಿಂದ ಪ್ರಶಸ್ತಿಯನ್ನೂ ಪಡೆದಿದ್ದಾಳೆ.
ಜಯಲಕ್ಷ್ಮಿ ಈ ಹಿಂದೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದು, ಸಾವಯವ ಕೃಷಿಯತ್ತ ಹೊರಳಲು ಯುವಜನತೆಗೆ ಸ್ಫೂರ್ತಿ ಮತ್ತು ಪ್ರೋತ್ಸಾಹ ನೀಡಬೇಕು ಎಂದು ಮೋದಿಯವರಲ್ಲಿ ಮನವಿ ಮಾಡಿಕೊಂಡಿದ್ದಳು.