ಹುಬ್ಬಳ್ಳಿ, ಸೆ. 03 (DaijiworldNews/PY): "ಮುಂದಿನ ವಿಧಾನಸಭಾ ಚುನಾವಣೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆಸಲಾಗುವುದು ಎಂದು ಹೇಳಿದ್ದು ಒಳ್ಳೆಯ ವಿಚಾರ" ಎಂದು ಮಾಜಿ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, "ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮುಂದಿನ ಚುನಾವಣೆಯ ನೇತೃತ್ವ ನೀಡಿದ್ದು ಒಳ್ಳೆಯ ವಿಚಾರ" ಎಂದಿದ್ದಾರೆ.
"ಮುಂದಿನ ವಿಧಾನಸಭಾ ಚುನಾವಣೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಘೋಷಣೆ ಮಾಡಿರುವುದು ಒಳ್ಳೆಯ ವಿಷಯ. ನಾವೂ ಕೂಡಾ ಪಕ್ಷದ ನಿರ್ಧಾರದಂತೆ ಮುಂದುವರಿಯುತ್ತೇವೆ. ಆದರೆ, ಮುಂದಿನ ಚುನಾವಣೆಗೆ ಇನ್ನೂ ಸಮಯವಿದೆ. ಇದರೊಂದಿಗೆ ಸರ್ಕರದಲ್ಲಿ ಹಿರಿಯರನ್ನು ಕಡೆಗಣಿದ ಕುರಿತು ಈಗಾಗಲೇ ಪಕ್ಷದ ನಾಯಕರ ಜೊತೆ ನಾವು ಚರ್ಚಿಸಿದ್ದೇವೆ" ಎಂದು ಹೇಳಿದ್ದಾರೆ.
"ನಾನು ಪಾಲಿಕೆ ಚುನಾವಣೆಯಲ್ಲಿ ಭಾಗವಹಿಸಿ ಪ್ರಚಾರ ಮಾಡಿದ್ದೇನೆ. ಜನರಿಂದ ಸಾಕಷ್ಟು ಉತ್ತಮವಾದ ಪ್ರತಿಕ್ರಿಯೆ ಸಿಕ್ಕಿದೆ. ಬಂಡಾಯಕೋರರು ಕೆಲವು ಕಡೆ ಸ್ಪರ್ಧೆ ಮಾಡಿದ್ದು, ಅವರ ವಿರುದ್ದ ಕ್ರಮ ಕೈಗೊಂಡಿದ್ದೇವೆ. ಯಾವ ಬಂಡಾಯಗಾರರು ಗೆಲ್ಲುವುದಿಲ್ಲ. ಅವರಿಗೆ ಬೆಂಬಲ ನೀಡಿಲ್ಲ" ಎಂದು ತಿಳಿಸಿದ್ದಾರೆ.
ಗುರುವಾರ ದಾವಣಗೆರೆಯಲ್ಲಿ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, "ಮುಂದಿನ ವಿಧಾನಸಭಾ ಚುನಾವಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ನಡೆಸಲಾಗುವುದು" ಎಂದು ಘೋಷಿಸಿದ್ದರು.