ಕೇರಳ, ಸೆ. 03 (DaijiworldNews/PY): ಕೊಲ್ಲಂನ ಪರವೂರ್ ಬೀಚ್ ರಸ್ತೆಯಲ್ಲಿ ಕಾರಿನಲ್ಲಿ ಆಹಾರ ಸೇವಿಸುತ್ತಿದ್ದ ತಾಯಿ ಹಾಗೂ ಮಗನ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಆಶೀಶ್ ಎಂಬಾತ ಶಾಮಲಾ (44) ಹಾಗೂ ಸಲು (21) ಎಂಬವರ ಮೇಲೆ ಹಲ್ಲೆ ನಡೆಸಿದ್ದು, ಆಶೀಶ್ ಅನ್ನು ಪೊಲಿಸರು ಬಂಧಿಸಿದ್ದಾರೆ.
ಹೊಟೇಲ್ನಲ್ಲಿ ಆಹಾರ ಸೇವಿಸಲು ಅವಕಾಶ ಇಲ್ಲದೇ ಇರುವ ಕಾರಣ ನಾವು ಕಾರಿನಲ್ಲಿ ಆಹಾರ ಸೇವಿಸುತ್ತಿದ್ದೆವು. ಈ ವೇಳೆ ಅಲ್ಲಿಗೆ ಧಾವಿಸಿದ ವ್ಯಕ್ತಿ ಇಲ್ಲಿ ಅನೈತಿಕ ಚಟುವಟಿಕೆ ಅವಕಾಶವಿಲ್ಲ ಎಂದು ಹೇಳಿದ್ದಾನೆ. ನಾನು ಹಾಗೂ ನನ್ನ ತಾಯಿ ಆಹಾರ ಸೇವಿಸುತ್ತಿದ್ದೇವೆ. ಇಲ್ಲಿ ಯಾವ ಅನೈತಿಕ ಚಟುವಟಿಕೆ ನಡೆದಿಲ್ಲ ಎಂದು ಮಗ ಹೇಳಿದ್ದು, ಇದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು
ದಾಳಿಕೋರ ಹೇಳಿದ್ದಾರೆ ಎಂದು ಶ್ಯಾಮಲಾ ತಿಳಿಸಿದ್ದಾರೆ.
ಈ ಸಂದರ್ಭ ಆಶೀಶ್ ಎಂಬಾತ ಮಗನ ಮೇಲೆ ಹಲ್ಲೆ ನಡೆಸಿದ್ದು, ಕಾರಿಗೂ ಹಾನಿಯುಂಟು ಮಾಡಿದ್ದಾನೆ. ನಮ್ಮಿಬ್ಬರ ಮೇಲೆ ಆತ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ್ಧಾನೆ ಎಂದಿದ್ದಾರೆ.
ಘಟನೆಯ ಬಗ್ಗೆ ತಾಯಿ ಹಾಗೂ ಮಗ ಪರವೂರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿ ಕೊಲ್ಲಂ ಸಹಾಯಕ ಆಯುಕ್ತ ಜಿ ಗೋಪಕುಮಾರ್, "ಪೊಲೀಸರ ಕಡೆಯಿಂದ ಯಾವುದೇ ಲೋಪವಾಗಿಲ್ಲ. ತಾಯಿ ಮತ್ತು ಮಗ ಗಾಯಗೊಂಡಿದ್ದು, ದೂರು ದಾಖಲಿಸಲು ಠಾಣೆಗೆ ಬಂದಿದ್ದರು. ಈ ವೇಳೆ ಅವರಿಗೆ ವೈದ್ಯಕೀಯ ಸೇವೆ ನೀಡಲು ಆದ್ಯತೆ ನೀಡಲಾಯಿತು. ಆದ್ದರಿಂದ, ಅವರನ್ನು ಮೊದಲು ಆಸ್ಪತ್ರೆಗೆ ದಾಖಲಾಗುವಂತೆ ನಾವು ಸೂಚಿಸಿದ್ದೇವೆ" ಎಂದಿದ್ದಾರೆ.