ಹುಬ್ಬಳ್ಳಿ, ಸ.03 (DaijiworldNews/HR): ಸರಕಾರಿ ಬಂಗಲೆ ನೀಡಿಕೆ ಬಗ್ಗೆ ಸರ್ಕಾರಕ್ಕೆ ಈಗಾಗಲೇ ಏಳು ಪತ್ರ ಬರೆದಿದ್ದು, ಬಂಗಲೆಗಾಗಿ ಭಿಕ್ಷೆ ಬೇಡುವುದಿಲ್ಲ. ಬಂಗಲೆ ನೀಡಿದರೆ ನೀಡಲಿ ಇಲ್ಲವಾದರೆ ಬಿಡಲಿ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಂಗಲೆಗಾಗಿ ಸರ್ಕಾರಕ್ಕೆ ಮತ್ತೊಂದು ಪತ್ರ ಬರೆಯುವೆ. ಮುಂದಿನ ನಿರ್ಧಾರ ಸರಕಾರಕ್ಕೆ ಬಿಟ್ಟಿದ್ದು, ಇನ್ನೆಂದೂ ಬಂಗಲೆ ವಿಚಾರವಾಗಿ ಕೇಳುವುದಿಲ್ಲ.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೌಲ್ಯಧಾರಿತ ರಾಜಕೀಯ ಇಲ್ಲವಾಗುತ್ತಿದೆ. ಹಳೇ ಚುನಾವಣೆ ವ್ಯವಸ್ಥೆ ಇದೀಗ ಮುಗಿದ ಅಧ್ಯಾಯವಾಗಿದೆ" ಎಂದರು.
ಶಾಲೆಗಳ ಆರಂಭದ ಕುರಿತು ಮಾತನಾಡಿದ ಅವರು, "ಈ ಹಿಂದೆಯೇ ಶಿಕ್ಷಣ ಸಚಿವರಾಗಿದ್ದ ಸುರೇಶ್ ಕುಮಾರ್ ಅವರಿಗೆ ಹೇಳಿದ್ದೆ. ಈಗಲೂ ಹೇಳುತ್ತೇನೆ ಶಾಲೆಗಳು ಆರಂಭಿಸಬೇಕು. ಶಿಕ್ಷಕರ ವರ್ಗಾವಣೆ ಅರ್ಧ ತಾಸಿನ ಕೆಲಸ, ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಲಸ ಆಗುತ್ತಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಶಿಕ್ಷಕರು ವರ್ಗಾವಣೆ ಆಗಿಲ್ಲ" ಎಂದು ಹೇಳಿದ್ದಾರೆ.