ಕಲಬುರ್ಗಿ, ಸೆ. 03 (DaijiworldNews/PY): "ದೇಶದ ಜನತೆಗೆ ಅಚ್ಛೆ ದಿನ್ ಭರವಸೆ ನೀಡುತ್ತಾ ಕೇಂದ್ರದಲ್ಲಿ ಅಧಿಕಾರ ಹಿಡಿದ ಬಿಜೆಪಿ ಕಳೆದ ಏಳು ವರ್ಷಗಳಿಂದ ಜನರ ಜೇಬಿಗೆ ಕತ್ತರಿ ಹಾಕುವುದನ್ನೇ ತನ್ನ ಕಾರ್ಯವನ್ನಾಗಿಸಿದೆ" ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು, "ತಮ್ಮ ಉದ್ಯಮಿ ಮಿತ್ರರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಲಾಭ ಮಾಡಿಕೊಡುವ ಸಲುವಾಗಿ ಸಾಲ ಮನ್ನಾ ಮಾಡಲು ಜನಸಾಮಾನ್ಯರ ಮೇಲೆ ತೆರಿಗೆ ಭಾರವನ್ನು ಹೊರಿಸಿದ್ದಾರೆ. ಕಳೆದ ಏಳು ವರ್ಷಗಳಲ್ಲಿ ಅಡುಗೆ ಅನಿಲ ಬೆಲೆ 410 ರೂ.ನಿಂದ 885 ರೂ. ಗೆ, ಪೆಟ್ರೋಲ್ ಬೆಲೆ 71 ರೂ.ನಿಂದ 105 ರೂ.ಗೆ, ಡೀಸೆಲ್ ಬೆಲೆ 57 ರೂ.ನಿಂದ 95 ರೂ. ಗೆ ಹೆಚ್ಚಳವಾಗಿದೆ" ಎಂದು ತಿಳಿಸಿದ್ದಾರೆ.
"ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಒಂದು ಬ್ಯಾರೆಲ್ಗೆ 145 ಡಾಲರ್ ಇದ್ದ ಸಂದರ್ಭ ಅಂದಿನ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ಬೆಲೆಯನ್ನು 60 ರೂ.ನಿಂದ 70 ರೂ.ಗೆ ನಿಗದಿಪಡಿಸಿತ್ತು. ಸದ್ಯ ಕಚ್ಚಾ ತೈಲದ ಬೆಲೆ ಒಂದು ಬ್ಯಾರಲ್ಗೆ 70 ಡಾಲರ್ಗೆ ಇಳಿಕೆಯಾಗಿದ್ದರೂ ಕೂಡಾ ಬಿಜೆಪಿ ಪೆಟ್ರೋಲ್ ಬೆಲೆಯನ್ನು ಶತಕದ ಗಡಿ ದಾಟಿಸಿದೆ" ಎಂದು ಲೇವಡಿ ಮಾಡಿದ್ದಾರೆ.
"ಪೆಟ್ರೋಲ್ ಬೆಲೆ ಹಾಗೂ ಡೀಸೆಲ್ ಬೆಲೆ ಮಾತ್ರವಲ್ಲದೇ ವಿದ್ಯುತ್ ಬೆಲೆಯನ್ನು ಕೂಡಾ ಕೇಂದ್ರ ಶೇ.30ರಷ್ಟು ಹೆಚ್ಚಿಸಿದೆ. ಖಾಲಿ ನಿವೇಶನ, ಮನೆ ಮೇಲಿನ ತೆರಿಗೆಯನ್ನು ಕೂಡಾ ಏರಿಕೆ ಮಾಡಿದೆ. ಕಬ್ಬಿಣದ ಬೆಲೆ ಪ್ರತಿ ಟನ್ಗೆ 30 ಸಾವಿರದಿಂದ 40 ಸಾವಿರದವರೆಗೆ ಹೆಚ್ಚಳ ಮಾಡಿದೆ" ಎಂದಿದ್ದಾರೆ.
"ಬಿಜೆಪಿ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಸ್ವರ್ಗವನ್ನೇ ಧರೆಗಿಳಿಸುವುದಾಗಿ ಜನಸಾಮಾನ್ಯರಿಗೆ ಭರವಸೆ ನೀಡಿತ್ತು. ಆದರೆ, ಅಧಿಕಾರಕ್ಕೆ ಬಂದ ಬಳಿಕ ರಕ್ತ ಹೀರಿವ ತಿಗಣೆಯಂತೆ ವರ್ತಿಸುತ್ತಿದೆ" ಎಂದು ಕಿಡಿಕಾರಿದ್ದಾರೆ.