ಬಳ್ಳಾರಿ, ಸೆ 3 (DaijiworldNews/MS): ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರ ಅಭಿಮಾನಿ ಬಳಗದ ಸದಸ್ಯರು ಸಂಡೂರು ತಾಲೂಕಿನ ಬಂಡ್ರಿ ಗ್ರಾಮದಲ್ಲಿ ಸುದೀಪ್ ಜನ್ಮ ದಿನದ ಪ್ರಯುಕ್ತ ಗುರುವಾರ ಕೋಣದ ಮರಿಯನ್ನು ಸಾರ್ವಜನಿಕವಾಗಿ ಕಡಿದು, ಅದರ ರಕ್ತವನ್ನು ಕಿಚ್ಚ ಸುದೀಪ್ ಅವರ ಭಾವಚಿತ್ರಕ್ಕೆ ಎರಚುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಗ್ರಾಮದ ವಾಲ್ಮೀಕಿ ವೃತ್ತದ ಬಳಿ ಕಿಚ್ಚ ಅಭಿಮಾನಿಗಳು ಸದಾ ಜನನಿಬಿಡ ಸ್ಥಳವಾಗಿರುವ ಗ್ರಾಮದ ಮಧ್ಯದ ವೃತ್ತದಲ್ಲಿ ಈ ರೀತಿ ಕೋಣದ ಮರಿಯನ್ನು ಕಡಿದು ಕೇಕೆ ಹಾಕುತ್ತಿರುವ ದೃಶ್ಯಗಳು ವಿಡಿಯೋದಲ್ಲಿವೆ.
ಅಭಿಮಾನಿಗಳು ಸುದೀಪ್ ಅವರ ಬೃಹತ್ ಕಟೌಟ್ ಹಾಕಿಸಿ ಅದರ ಎದುರು ಕೋಣ ಬಲಿ ಕೊಟ್ಟಿದ್ದಾರೆ. ಘಟನೆ ಕುರಿತು ಕೂಡ್ಲಿಗಿ ಪೊಲೀಸರಿಗೆ ತಿಳಿಸಲಾಗಿದೆ. ಪೊಲೀಸರು ಗ್ರಾಮಕ್ಕೆ ತೆರಳಿ, ವಿಡಿಯೊ ಆಧಾರದ ಮೇಲೆ ಪ್ರಕರಣದಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚುವ ಕಾರ್ಯ ನಡೆಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಎಫ್.ಐ. ಆರ್ ದಾಖಲಿಸಲಾಗುವುದು' ಎಂದು ತಹಶೀಲ್ದಾರ್ ಎಚ್.ಜೆ. ರಶ್ಮಿ ತಿಳಿಸಿದರು.
ಈ ಘಟನೆಗೆ ಸಂಬಂಧಪಟ್ಟಂತೆ 25 ಆರೋಪಿಗಳ ವಿರುದ್ಧ ಕೂಡ್ಲಿಗಿ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.