ಹಾವೇರಿ, ಸ. 02 (DaijiworldNews/HR): "ಸೆ.6ರಿಂದ 6,7,8 ನೇ ತರಗತಿ ಪ್ರಾರಂಭವಾಗುತ್ತವೆ. ಪೋಷಕರು ಶಾಲೆಗಳಿಗೆ ಬಂದು ಒಂದನೇ ತರಗತಿಯಿಂದಲೇ ಶಾಲೆ ಪ್ರಾರಂಭಿಸಿ ಎಂದು ಹೇಳುತ್ತಿದ್ದು ಮಕ್ಕಳ ಇಚ್ಚೆ ನೋಡಿಕೊಂಡೇ ಮುಂದಿನ ದಿನಗಳಲ್ಲಿ 1 ರಿಂದ 5ರವರಗೆ ಶಾಲೆ ಆರಂಭ ಮಾಡುತ್ತೇವೆ" ಎಂದು ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಪೂರ್ಣ ಪ್ರಮಾಣದ ಶಾಲೆ ಆರಂಭಿಸಿ. ಆನ್ ಲೈನ್ ಕ್ಲಾಸ್ ನಿಂದ ನಮಗೆ ಸರಿಯಾದ ಶಿಕ್ಷಣ ಸಿಗುತ್ತಿಲ್ಲ ಎಂದು ವಿದ್ಯಾರ್ಥಿಗಳೂ ಹೇಳುತ್ತಿದ್ದು, ಒಂದು ವಾರ ಅಥವಾ 10 ದಿನ ಕಾದು ನೋಡಲಾಗುವುದು. ಮೂರನೇ ಅಲೆ ಬಗ್ಗೆ ಚರ್ಚೆ ಆಗುತ್ತಿದ್ದು, ಮಕ್ಕಳ ಆರೋಗ್ಯದ ಮೇಲೆ ಕಾಳಜಿ ವಹಿಸಲಾಗುತ್ತಿದೆ" ಎಂದರು.
ಇನ್ನು "ಕೆಲವು ಖಾಸಗಿ ಶಾಲೆಗಳು ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿದ್ದು, ನಗರ ಪ್ರದೇಶಗಳಲ್ಲಿ ಖಾಸಗಿ ಶಾಲೆಗಳಿಂದ ಈ ರೀತಿ ಸಮಸ್ಯೆ ಆಗುತ್ತಿದೆ. ಆಂಧ್ರದಲ್ಲಿ ಈಗಾಗಲೇ ಒಂದು ಕಾನೂನು ತಂದಿದ್ದಾರೆ. ಆಂಧ್ರ ಮಾದರಿಯಲ್ಲಿ ಕಾನೂನು ರೂಪಿಸುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡಲಾಗುವುದು" ಎಮ್ದು ಹೇಳಿದ್ದಾರೆ.