ಬೆಂಗಳೂರು,ಸೆ 2 (DaijiworldNews/MS): ರಾಜೀವ್ ಗಾಂಧಿ ಖೇಲ್ ರತ್ನ ಅವಾರ್ಡ್ ನ್ನು ಮೇಜರ್ ಧ್ಯಾನ್ ಚಂದ್ ರತ್ನ ಅವಾರ್ಡ್ ಎಂದು ಕೇಂದ್ರ ಸರ್ಕಾರ ಪುನರ್ ನಾಮಕರಣ ಮಾಡಿತ್ತು. ಇದಾದ ಬಳಿಕ ಅಸ್ಸಾಂನ ಒರಾಂಗ್ನಲ್ಲಿರುವ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಹೆಸರನ್ನು ತೆಗೆದು ಹಾಕಿ ಒರಾಂಗ್ ನ್ಯಾಶನಲ್ ಪಾರ್ಕ್ ಎಂದು ಹೆಸರನ್ನು ಬದಲಿಸಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ. ಈ ಬೆಳವಣಿಗೆಗಳ ನಡುವೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಹೆಸರು ಬದಲಾವಣೆಗೆ ಮುಖ್ಯಮಂತ್ರಿಗಳಿಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಪತ್ರ ಬರೆದಿದ್ದಾರೆ.
ಈ ಹಿಂದೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಹೆಸರು ಬದಲಾವಣೆ ಆನ್ ಲೈನ್ ಅಭಿಯಾನ ನಡೆದಿತ್ತು. ಸದ್ಯ ಸಂಸದ ಪ್ರತಾಪ್ ಸಿಂಹ ಅವರು ಉದ್ಯಾನವನಕ್ಕೆ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಅವರ ಹೆಸರು ಇಡುವಂತೆ ಮನವಿ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರತಾಪ್ ಸಿಂಹ ಅವರು, ಕರ್ನಾಟಕ ಸಿಎಂ ಅಧಿಕೃತ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿದ್ದು ರಾಜೀವ್ ಗಾಂಧಿ ನಾಗರಹೊಳೆ ನ್ಯಾಷನಲ್ ಪಾರ್ಕ್ ಮತ್ತು ಹುಲಿ ಸಂರಕ್ಷಿತಾರಣ್ಯಕ್ಕೆ ಫೀಲ್ಡ್ ಮಾರ್ಷಲ್ ಕೆಎಂ ಕರಿಯಪ್ಪ ನ್ಯಾಷನಲ್ ಪಾರ್ಕ್ ಮತ್ತು ಹುಲಿ ಸಂರಕ್ಷಿತಾರಣ್ಯ ಎಂದು ಮರುನಾಮಮಕರಣ ಮಾಡುವಂತೆ ಮನವಿ ಮಾಡಿದ್ದಾರೆ.