ಬೆಂಗಳೂರು, ಸ. 02 (DaijiworldNews/HR): ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಬಳಿಕ ಉದ್ಯಮಿಗಳ 7 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ. ಆ ಪೈಕಿ ಅದಾನಿ ಅವರದ್ದೇ 4.50 ಲಕ್ಷ ಕೋಟಿ ರೂ. ಎನ್ಪಿಎ ಇದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಜಗತ್ತಿನ ಅಭಿವೃದ್ದಿ ಹೊಂದುವ ವೇಗದ ದೇಶಗಳಲ್ಲಿ ಭಾರತ 5ನೇ ಸ್ಥಾನದಲ್ಲಿತ್ತು. ಆದರೆ ಮೋದಿ ಅವರ ಆಡಳಿತದಲ್ಲಿ ಈಗ 193 ದೇಶಗಳ ಸಾಲಿನಲ್ಲಿ 164 ನೇ ಸ್ಥಾನ ಗಳಿಸಿದೆ. ಭಾರತಕ್ಕಿಂತ ಬಾಂಗ್ಲಾ ಜಿಡಿಪಿ ಏರುತ್ತಿದೆ. ಬಿಜೆಪಿ ಸರ್ಕಾರ ಕಾರ್ಪೊರೇಟ್ ಕುಳಗಳನ್ನು ಬದುಕಿಸಲು ಟೊಂಕ ಕಟ್ಟಿ ನಿಂತಿದೆ" ಎಂದರು.
"7 ವರ್ಷದಲ್ಲಿ ಪೆಟ್ರೊಲ್, ಡೀಸೆಲ್, ಅಡುಗೆ ಅನಿಲದಿಂದ ಹೆಚ್ಚುವರಿ ತೆರಿಗೆ 22 ಲಕ್ಷ ಕೋಟಿ ಸಂಗ್ರಹವಾಗಿದ್ದು, ಕರ್ನಾಟಕದಿಂದ 1.20 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ. ಕಾಂಗ್ರೆಸ್ ಸರ್ಕಾರ ಮಾಡಿದ್ದ ಸಾಲ ತೀರಿಸಬೇಕು ಅಂದಿದ್ದರು. ಆದರೆ ಸಾಲ ಇದ್ದದ್ದು 7 ಲಕ್ಷ ಕೋಟಿ, ಹೆಚ್ಚುವರಿ ತೆರಿಗೆ ಸಂಗ್ರಹ ಆಗುದ್ದು 22 ಲಕ್ಷ ಕೋಟಿ" ಎಂದಿದ್ದಾರೆ.
ಇನ್ನು "ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಇಷ್ಟಾದರೂ ಅಚ್ಛೇ ದಿನ್ ಎನ್ನುತ್ತಿದ್ದಾರೆ. ಮೋದಿ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.