ಚಿಕ್ಕಮಗಳೂರು, ಸ. 02 (DaijiworldNews/HR): ಜೆಡಿಎಸ್ ಪಕ್ಷದ ಶಕ್ತಿಯೇ ಜಿ.ಟಿ.ದೇವೇಗೌಡ. ಅವರು ಕಾಂಗ್ರೆಸ್ಗೆ ಹೋದರೆ ಪಕ್ಷಕ್ಕೆ ಭಾರಿ ನಷ್ಟವಾಗಲಿದೆ ಎಂದು ಮಾಜಿ ಶಾಸಕ ವೈಎಸ್ವಿ ದತ್ತ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಜಿ.ಟಿ.ದೇವೇಗೌಡರಿಗೆ ಪಕ್ಷ ಸೂಕ್ತ ಆದ್ಯತೆ, ಗೌರವ ನೀಡದಿದ್ದರೆ ತಪ್ಪಾಗುತ್ತದೆ. ಹಿರಿಯರು ಮತ್ತು ಸಂಘಟನಾ ಶಕ್ತಿಯಾಗಿರುವ ಅವರು ಜನತಾ ಪರಿವಾರದಿಂದ ಬಂದವರು. ಅವರನ್ನು ಕಡೆಗಣಿಸಿ ಮತ್ಯಾರಿಗೋ ಆದ್ಯತೆ ನೀಡಿ ವೈಭವೀಕರಿಸಿದ್ದರಿಂದ ಅವರ ಮನಸ್ಸಿಗೆ ನೋವಾಗಿರಬಹುದು" ಎಂದರು.
"ಜಿ.ಟಿ.ದೇವೇಗೌಡ ಅವರನ್ನು ಬೇರೆ ಪಕ್ಷಕ್ಕೆ ಅವರನ್ನು ಹೋಗಲು ಬಿಡಬಾರದು. ಹಿರಿಯರಾದ ಅವರನ್ನು ಕರೆಸಿ ಮಾತನಾಡಬೇಕು. ಅವರ ಮನಸ್ಸಿನ ಭಾವನೆ ಅರ್ಥ ಮಾಡಿಕೊಂಡು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಬೇಕು" ಎಂದಿದ್ದಾರೆ.
ಇನ್ನು "ಜೆಡಿಎಸ್ ಪಕ್ಷ ಬಿಜೆಪಿ ಜತೆ ಹತ್ತಿರವಾದರೆ ನಮಗೆ ಸಮಸ್ಯೆ. ಅಲ್ಪಸಂಖ್ಯಾತರ ಒಡನಾಟ ಹೊಂದಿ ಅವರನ್ನೇ ನೆಚ್ಚಿಕೊಂಡಿರುವ ನಮ್ಮಂಥವರಿಗೆ ತುಂಬ ಕಷ್ಟವಾಗುತ್ತದೆ. ನಾವು ಕೋಮುವಾದಿ ಶಕ್ತಿಗಳನ್ನು ವಿರೋಧಿಸಿ, ಜಾತ್ಯತೀತ ನಿಲುವಿಗೆ ಕಟ್ಟಿಬದ್ಧರಾಗಿರೋರು. ಪಕ್ಷದ ನಿಲುವು ಎಲ್ಲಿಯವರೆಗೆ ಸ್ಪಷ್ಟವಾಗಿರುತ್ತದೋ ಅಲ್ಲಿಯವರೆಗೆ ಬೇರೆ ಆಲೋಚನೆ ಇಲ್ಲ" ಎಮ್ದು ಹೇಳಿದ್ದಾರೆ.