ಶ್ರೀನಗರ, ಸೆ 2 (DaijiworldNews/MS): ಜಮ್ಮು ಕಾಶ್ಮೀರದಲ್ಲಿ ಭಾರತದ ಪ್ರತ್ಯೇಕತಾ ಹೋರಾಟ ನಡೆಸುತ್ತಿದ್ದ ಹುರಿಯತ್ ಮುಖಂಡ ಸೈಯದ್ ಅಲಿ ಶಾ ಗಿಲಾನಿ ನಿಧನರಾಗಿದ್ದಾರೆ.
91 ವರ್ಷ ವಯಸ್ಸಿನ ಗಿಲಾನಿ ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ತೆಹ್ರಿಕ್-ಎ-ಹುರಿಯತ್ ಎಂಬ ಕಟ್ಟರ್ ಪ್ರತ್ಯೇಕತಾವಾದಿ ಸಂಘಟನೆಯ ಸಂಸ್ಥಾಕರಾಗಿದ್ದ ಸೈಯದ್ ಗಿಲಾನಿ ಮೂರು ದಶಕಗಳಿಗೂ ಹೆಚ್ಚಿನ ಕಾಲ ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕ ರಾಜ್ಯವಾಗಬೇಕು ಎಂದು ಹೋರಾಟ ನಡೆಸಿದ್ದರು, ಬಳಿಕ ತಮ್ಮ ಸ್ಥಾನಕ್ಕೆ ಕಳೆದ ವರ್ಷವಷ್ಟೇ ರಾಜೀನಾಮೆ ನೀಡಿದ್ದರು.
ನೂರಾರು ಕೋಟಿ ರು ಒಡೆಯ ಗಿಲಾನಿ ಅಲ್ಲದೆ ಪುತ್ರರಾದ ನಾಸೀಮ್, ನಯೀಮ್, ಪುತ್ರಿಯರಾದ ಅನಿಷಾ, ಫಾರ್ ಹಾತ್ ಸೇರಿ ಆರು ಜನರ ಮೇಲೆ ಎನ್ಐಎ ಅಧಿಕಾರಿಗಳು ಕಣ್ಣಿಟ್ಟಿದ್ದು, ಅಕ್ರಮ ಆಸ್ತಿ ಗಳಿಕೆ, ಪಾಕಿಸ್ತಾನದಿಂದ ಹಣ ಪಡೆದು, ಕಣಿವೆ ರಾಜ್ಯದಲ್ಲಿ ವಿಧ್ವಂಸಕ ಕೃತ್ಯಕ್ಕೆ ಬಳಕೆ ಮುಂತಾದ ಆರೋಪಗಳ ಕುರಿತ ತನಿಖೆ ಜಾರಿಯಲ್ಲಿದೆ.
1972, 1977, 1987ರಲ್ಲಿ ಸೋಪೋರ್ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಚುನಾಯಿತರಾದ ಅವರು ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ ಧ್ವನಿಯಾಗಿದ್ದರು. ಅವರು ಇಬ್ಬರು ಗಂಡು ಮಕ್ಕಳು ಸೇರಿ ಆರು ಮಕ್ಕಳನ್ನ ಅಗಲಿದ್ದಾರೆ.